ಹೌದು ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಪಾಲನಹಳ್ಳಿ ಮಠ, ಇನ್ಮುಂದೆ ಮಠ ಮಾತ್ರವಲ್ಲ, ಅದೊಂದು ಕಲ್ಪವೃಕ್ಷ ಅಂದರೆ ತಪ್ಪಾಗುವುದಿಲ್ಲ. ಹೀಗೆ ಒಂದು ಮಠಕ್ಕೆ ಕಲ್ಪವೃಕ್ಷಕ್ಕೆ ಹೋಲಿಕೆ ಮಾಡುವುದು ಅತಿಶಯೋಕ್ತಿ ಎನ್ನಿಸಬಹುದು. ಆದ್ರೆ ಮಠದ ಧಾರ್ಮಿಕ ಕೈಂಕರ್ಯಗಳು ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳ ಜೊತೆಗೆ ಶ್ರೀಗಳಿಗೆ ಇರುವ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ ವಿಚಾರವೇ ಸರಿ.
ನದಿಗಳ ಜೋಡಣೆಯ ಆದಿಯಾಗಿ, 18 ಮಠಗಳ ಅಭಿವೃದ್ಧಿಗೆ ಪಾಲನಹಳ್ಳಿ ಮಠ ಟೊಂಕಕಟ್ಟಿದ್ದು,
ಶ್ರೀಸಿದ್ಧರಾಜ ಸ್ವಾಮಿಗಳು ಸಂಕಲ್ಪ ಮಾಡಿದ್ದಾರೆ. ಸೋಲೂರು ಹೋಬಳಿಯ ಪಾಲನಹಳ್ಳಿ ಮಠದ ಸ್ವಾಮಿಗಳಾದ ಡಾ.ಸಿದ್ದರಾಜು ಸ್ವಾಮಿಗಳು ಈಗಾಗಲೇ ತ್ರಿವಿಧ ದಾಸೋಹ ಮಾಡುತ್ತಿದ್ದು ಇದರ ಜೊತೆಗೆ ಇದೀಗ ವಿವಿಧ ಮಠಗಳ ಶ್ರಯೋಭಿವೃದ್ಧಿಗೆ ಶ್ರೀಗಳು ಶ್ರಮಿಸುತ್ತಿದ್ದಾರೆ. ಭವಿಷ್ಯದ ಹಿತದೃಷ್ಟಿಯಿಂದ ನದಿಗಳ ಜೋಡಣೆಯಂತಹ ಕೈಂಕರ್ಯಕ್ಕೂ ಸ್ವಾಮಿಗಳು ಮುಂದಾಗಿದ್ದಾರೆ.
ಮಠಕ್ಕೆ ಬಂದಿರುವ 50 ಸಾವಿರ ಕೋಟಿ ಬೃಹತ್ ಮೊತ್ತದ ಅನುದಾನವನ್ನು ಬಂಡವಾಳವಾಗಿಟ್ಟುಕೊಂಡ ಶ್ರೀಗಳು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ಇರಲಿ ಎಂಬ ನಿಟ್ಟಿನಲ್ಲಿ ನೂತನ ಕೆಲಸ ಕಾರ್ಯಗಳಿಗೆ ಕೈ ಹಾಕಿದ್ದಾರೆ.
ಪಾಲನಹಳ್ಳಿ ಮಠದ ಆವರಣದಲ್ಲಿ ಆಯೋಜನೆಯಾಗಿದ್ದ ಶ್ರೀಗಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್ಎಸ್ಎಸ್ಟಿ, ಡಿ.ಎಸ್.ಬನ್ರೋನ್, ಕಂಪನಿಯವರ ಸಹಯೋಗದೊಂದಿಗೆ ಭಗವತಿದೇವಿ ಟೆಂಪಲ್ ಟ್ರಸ್ಟ್ ಮೂಲಕ 50 ಸಾವಿರ ಕೋಟಿ ಹೂಡಿಕೆಯನ್ನು ವಿವಿಧ ಯೋಜನೆಗಳಲ್ಲಿ ಮಾಡಿದ್ದಾರೆ. ಈ ಹೂಡಿಕೆಯಿಂದ ಆಯುರ್ವೇದ, ಗ್ರಾಮೀಣಾಭಿವೃದ್ಧಿ ಯುನಿವರ್ಸಿಟಿ, ಸಸ್ಯಶಾಸ್ತ್ರ ಮತ್ತು ನದಿ ಜೋಡಣೆಯಂತಹ ಮಹತ್ಕಾರ್ಯ ಮಾಡಲಾಗುತ್ತಿದೆ ಎಂದಿದ್ದಾರೆ.
ಇನ್ನು ಇದರ ಜೊತೆಗೆ ಭಾರತೀಯ ಸಂಪ್ರದಾಯದ ಮೌಲ್ಯಾಧಾರಿತ ಶಿಕ್ಷಣ, ಆರೋಗ್ಯ ಸೇವೆ ಸೇರಿದಂತೆ ನಿರುದ್ಯೋಗ ಅವಕಾಶಗಳನ್ನು ಒದಗಿಸುವುದು, ಸಾರ್ಟ್ ಆಪ್ಗಳಿಗೆ ಆದ್ಯತೆ ನೀಡುವುದು ಇದರ ಉದ್ದೇಶವಾಗಿದೆ.
ಮಠದ ಶ್ರೀಗಳು ಕೇವಲ ತಮ್ಮ ಮಠದ ಕೆಲಸ ಕಾರ್ಯಗಳನ್ನು ಮಾತ್ರ ಮಾಡುವುದಲ್ಲೇ, 18 ವಿವಿಧ ಮಠಗಳ ಜೀರ್ಣೋದ್ಧಾರಕ್ಕೂ ಮುಂದಾಗಿರುವುದು ಇಲ್ಲಿ ಗಮನಾರ್ಹ. ಈಗಿನ ಕಾಲದಲ್ಲಿ ತಾನು ಬದುಕಿದ್ರೆ ಸಾಕು ಎನ್ನುವ ವ್ಯಕ್ತಿಗಳೇ ಇರುವುದು, ಸ್ವಾಮಿಗಳು ಅಂತಹ ಬದುಕು ನಮಗೆ ಬೇಡ. ನಾವು ಬದುಕಿ, ಬೇರೆಯವರನ್ನು ಬದುಕಿಸಬೇಕೆಂಬ ನೀತಿಯನ್ನು ಜೀವನದ ಮೌಲ್ಯವಾಗಿ ಅಳವಡಿಕೆ ಮಾಡಿಕೊಂಡಿದ್ದು, ಇದಕ್ಕಾಗಿ ಈಗ 50 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿರುವುದು ನಿಜಕ್ಕೂ
ಶ್ಲಾಘನೀಯದ ಸಂಗತಿ.
ಈಗಿನ ಆಧುನಿಕ ಕಾಲದಲ್ಲಿ ಮಠಕ್ಕೆ ಯಾವುದೇ ಅನುದಾನಗಳು ಬಂದರೆ ಸಾಕು ಅದನ್ನು ಮಠದ ಶ್ರಯೋಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವವರೇ ಹೆಚ್ಚು. ಆದ್ರೆ ಇಲ್ಲಿ ಶ್ರೀಗಳು ಅದನ್ನು ಕೇವಲ ತಮ್ಮ ಮಠಕ್ಕೆ ಮಾತ್ರ ಸಿಮೀತವಾಗಿಸಿಕೊಳ್ಳದೇ, 18 ಮಠಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿರುವುದು, ಅವರಿಗೆ ತಾವು ಬೆಳೆದು ಇತರರನ್ನು ಬೆಳೆಸಬೇಕೆಂಬ ಮನಸ್ಸು ಇರುವುದನ್ನು ದೃಢಿಕರಿಸುತ್ತದೆ.
ಅಷ್ಟು ಮಾತ್ರವಲ್ಲದೆ, ಶ್ರೀಗಳು ಸಮಾಜಕ್ಕೆ ಕೊಡುಗೆಯಾಗಿ ಸಹ ತೊಡಗಿಸಿಕೊಂಡಿದ್ದು, ನದಿಗಳ ಜೋಡಣೆಯಂತಹ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವುದು ಅವರ ಸಮಾಜ ಬದ್ಧತೆಯನ್ನು ಎತ್ತಿ ಹಿಡಿದಿದೆ.
ಇನ್ನು ಶಿವರಾತ್ರಿ ಸಂದರ್ಭದಲ್ಲಿ ಶ್ರೀಮಠದ ಧಾರ್ಮಿಕ ಕೈಂಕರ್ಯಗಳು ವಾರಗಟ್ಟಲೇ ನಡೆದಿದ್ದು, ಶ್ರೀಗಳು ಸಮಾಜಮುಖಿ ಕೆಲಸ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಈಗ 50 ಸಾವಿರ ಕೋಟಿ ರೂಪಾಯಿ ಹೂಡಿಕೆಯೂ ಕೂಡ ಸಮಾಜಿಮುಖಿ ಕಾರ್ಯವೇ ಆಗಿದ್ದು, ಇಡೀ ದೇಶದಲ್ಲಿ ಅದೆಷ್ಟೋ ಸಹಸ್ರ ಸಹಸ್ರ ಮಠಗಳು ಇರಬಹುದು. ಆದ್ರೆ ಸೋಲೂರಿನ ಈ ಮಠ ವಿಭಿನ್ನ ಎನ್ನುವುದಕ್ಕೆ ಈಗ ಆಗುತ್ತಿರುವ ಅಭಿವೃದ್ಧಿ ಕಾರ್ಯವೇ
ಹಿಡಿದ ಕೈಗನ್ನಡಿ…!
ಇನ್ನು ಮಠದ ಶ್ರೀಗಳು ಯಾವುದೇ ನಿರೀಕ್ಷೆಯಿಲ್ಲದೇ ಹಗಲಿರುಳು ಸೇವೆಗೆ ಟೊಂಕ ಕಟ್ಟಿದ್ದು, ಸಿದ್ಧಗಂಗಾ ಶ್ರೀಗಳ ಪ್ರೇರಣೆ ಎಂದರೆ ತಪ್ಪಾಗಲಾರದು.
ಒಟ್ಟಾರೆ, ಶ್ರೀ ಮಠದ 50 ಸಾವಿರ ಕೋಟಿ ಹೂಡಿಕೆಯಿಂದ ಈಗ ಅಭಿವೃದ್ಧಿಯ ಜೊತೆಗೆ ನದಿಗಳ ಜೋಡಣೆ ಶ್ರೀ ಸಾಮಾನ್ಯನ ಜೀವನಕ್ಕೆ ಸಹಾಯಹಸ್ತವಾಗಲಿದ್ದು, ಇಂತಹ ಕಾರ್ಯಗಳು ಮಠದಿಂದ ಇನ್ನಷ್ಟು ನಡೆಯಲಿ ಎಂಬುದೇ ನಮ್ಮ ಹಾರೈಕೆ.
ನಮೃತಾ ವಿದ್ಯಾಸಂಸ್ಥೆ (ರಿ) ಮೈಸೂರು
ನಮೃತಾ ವಿದ್ಯಾಸಂಸ್ಥೆ (ರಿ) ಮೈಸೂರು, 1989 ಹಾಗೂ 90 ನೇ ಸಾಲಿನಿಂದ ಉತ್ತಮ ವಿದ್ಯಾಭ್ಯಾಸವನ್ನು ನೀಡಿಕೊಂಡು ಬಂದಿರುತ್ತದೆ. 20-02-2013 ನೇ ಸಾಲಿನಿಂದ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿರವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಒಂದು ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದವರು ಲಂಡನ್, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ಇನ್ನು ಅನೇಕ ದೇಶಗಳಲ್ಲಿ ಉನ್ನತ ಪದವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾಕ್ಟರ್, ಇಂಜಿನಿಯರ್ ಲಂಡನಿನ ಆಕ್ಸಫರ್ಡ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುತ್ತಾರೆ. 4 ಜನ ವಿಜ್ಞಾನಿಗಳು ಆಗಿರುತ್ತಾರೆ.
ಮಲೆನಾಡು ವಿದ್ಯಾಸಂಸ್ಥೆ (ರಿ) ತರೀಕೆರೆ
ಈ ಸಂಸ್ಥೆಯು 32 ವರ್ಷಗಳಿಂದ ಮಾನಸ ಪದವಿ ಪೂರ್ವ ಕಾಲೇಜ್ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ಕಾಲೇಜ್ ಉನ್ನತ ಶಿಕ್ಷಣವನ್ನು ಕೊಡಿಸಿಕೊಂಡು ಬಂದಿರುತ್ತದೆ. ಹಾಗೂ ಸಿ.ಬಿ.ಎಸ್.ಇ 1 ರಿಂದ 10 ರವರೆಗೂ ನಡಿಸಿಕೊಂಡು ಬಂದಿರುತ್ತದೆ. ಇಲ್ಲಿಯವರೆಗು 35,000 ಸಾವಿರ ಮಕ್ಕಳಿಗೆ ವಿದ್ಯದಾನ ಮಾಡಿರುತ್ತದೆ, ಹಾಗೂ 2024 ರಿಂದ ಪಾಲನಹಳ್ಳಿ ಮಠಕ್ಕೆ ಕಾರ್ಯನಿರ್ವಹಿಸಿರುತ್ತದೆ. ಅಧಿಕೃತವಾಗಿ 20-04-2026 ರಂದು ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಮಂಜೆಗೌಡರು ಮತ್ತು ಸಂಸ್ಥೆಯ ಕಾರ್ಯ ಸಮಿತಿಯವರು ಎಲ್ಲರೂ ಸೇರಿ ಅಧಿಕೃತವಾಗಿ ಪಾಲನಹಳ್ಳಿ ಮಠಕ್ಕೆ ಹಸ್ತಾಂತರಿಸಿರುತ್ತಾರೆ ಹಾಗೂ ಉನ್ನತ ಶಿಕ್ಷಣವನ್ನು ನೀಡಲು ಪಾಲನಹಳ್ಳಿ ಮಠವು ಮುಂದಾಗಿರುತ್ತದೆ. -ಡಾ.ಜಿ.ವೈ.ಪದ್ಮನಾಗರಾಜು
ವ್ಯವಸ್ಥಾಪಕ ಸಂಪಾದಕರು
ಇಂದು ಸಂಜೆ ದಿನ ಪತ್ರಿಕೆ
ಪಾಲನಹಳ್ಳಿ ಮಠ ಇನ್ಮುಂದೆ ಮಠವಲ್ಲ, ಅಭಿವೃದ್ಧಿಯ ಕಲ್ಪವೃಕ್ಷ!



