ನಾರ್ವೆ ಚೆಸ್ ಟೂರ್ನಿ 2026 ರ ವಿಜೇತ ತಮಿಳುನಾಡಿನ ಪ್ರಜ್ಞಾನಂದ, ಸಿಎಂ ಜೋಸೆಫ್ ವಿಜಯ್ಗೆ ಚೆಕ್ಮೇಟ್ ಇಟ್ಟಿದ್ದಾರೆ. ಅಚ್ಚರಿಯಾದ್ರೂ ಇದು ನಿಜ. ಅಷ್ಟಕ್ಕೂ ನಡೆದಿದ್ದೇನು?, ಎಂಬುದನ್ನು ನೋಡುವುದಾದ್ರೆ, ಇತ್ತೀಚೆಗೆ ನಾರ್ವೆಯಲ್ಲಿ ನಡೆದ ಚೆಸ್ ಟೂರ್ನಿ 2026 ರಲ್ಲಿ ತಮಿಳುನಾಡಿನ ಪ್ರಜ್ಞಾನಂದ ವಿಜೇತರಾಗಿದ್ದರು. ಅವರಿಗೆ ತಮಿಳುನಾಡು ಸರ್ಕಾರ ಸನ್ಮಾನ ಕಾರ್ಯಕ್ರಮವೊಂದನ್ನು ಸರಳವಾಗಿ, ಮುಖ್ಯಮಂತ್ರಿಗಳ ಕಚೇರಿಯಿಂದಲೇ, ಅವರ ಸೂಚನೆ ಮೇರೆಗೆ ಆಯೋಜಿಸಿತ್ತು. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ತಮ್ಮ ಸಿಬ್ಬಂದಿಗೆ ಪ್ರಜ್ಞಾನಂದ ಬರುವಾಗ ಅವರೊಂದಿಗೆ ಚೆಸ್ ಬೋರ್ಡ್ ತರಲು ಸೂಚನೆಯನ್ನು ಕೊಟ್ಟಿದ್ದರು. ಇದರ ಭಾಗವಾಗಿ ಇಂದು ಪ್ರಜ್ಞಾನಂದ ತಮ್ಮ ಪೋಷಕರೊಟ್ಟಿಗೆ ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಿದ್ದರು.
ಪ್ರಜ್ಞಾನಂದ ಹಾಗೂ ಅವರ ಪೋಷಕರನ್ನು ಬರಮಾಡಿಕೊಂಡ ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯ ಸಿಬ್ಬಂದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಳಿಕ ಕಚೇರಿಗೆ ಆಗಮಿಸಿದ ಸಿಎಂ ಜೋಸೆಫ್ ವಿಜಯ್, ಪ್ರಜ್ಞಾನಂದರ ಜೊತೆಗೆ ಕಚೇರಿಯಲ್ಲಿ 15 ನಿಮಿಷಗಳ ಕಾಲ ಚೆಸ್ ಆಡಿದರು. ರಾಜ್ಯದ ಸಿಎಂ ಜೊತೆಗೆ ಚೆಸ್ ಆಡಿದ ಪ್ರಜ್ಞಾನಂದ, ಮುಖ್ಯಮಂತ್ರಿಗಳಿಗೆ ಚೆಕ್ಮೇಟ್ ಮಾಡಿದರು. ಅದಕ್ಕೆ ಖುಷಿಯಾದ ಸಿಎಂ ಜೋಸೆಫ್ ವಿಜಯ್ ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನ ಮಾಡಿದ್ದು ಇನ್ನು ಎತ್ತರಕ್ಕೆ ರಾಜ್ಯದ ಹಾಗೂ ದೇಶದ ಹೆಸರನ್ನು ಬೆಳೆಸುವಂತೆ ಕಿವಿ ಮಾತನ್ನು ಹೇಳಿದರು.
ಇದರ ನಂತರ, ರಾಜ್ಯ ಸರ್ಕಾರದ ವತಿಯಿಂದ ಪ್ರಜ್ಞಾನಂದ ಅವರಿಗೆ ಸನ್ಮಾನ ಮಾಡಿ, 50 ಲಕ್ಷ ರೂಪಾಯಿಯ ಬಹುಮಾನವನ್ನು ನೀಡಿ, ಸರ್ಕಾರದಿಂದ ಯಾವ ಅನುಕೂಲಬೇಕಿದ್ದರೂ, ತಿಳಿಸಿ ಎಂದಿದ್ದು, ಕ್ರೀಡಾಪಟುವಿಗೆ ಪ್ರೋತ್ಸಾಹ ನೀಡಿದರು.
ಈ ಮೂಲಕ ಇಡೀ ನಾಡಿನ ಜನರ ಮನ ಗೆದ್ದು ಮುಖ್ಯಮಂತ್ರಿ ಆಗಿರುವ ಜೋಸೆಫ್ ವಿಜಯ್ ಅವರಿಗೆ ಪ್ರಜ್ಞಾನಂದ ಚೆಕ್ಮೇಟ್ ಮಾಡಿದ್ದು ಎಲ್ಲರ ಗಮನಸೆಳೆದಿದ್ದಲ್ಲದೇ, ಇಂತಹ ಕ್ರೀಡಾಪಟುವಿನ ಕ್ರೀಡಾ ಮನೋಭಾವವನ್ನು ಗುರುತಿಸಿದ ಸಿಎಂ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮಿಳುನಾಡು ಸಿಎಂಗೆ ಚೆಕ್ಮೇಟ್ ಇಟ್ಟ ಪ್ರಜ್ಞಾನಂದ!



