ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ಒಂದಲ್ಲ ಒಂದು ಕಾರಣಕ್ಕೆ ಮುಂದೂಡುತ್ತಲೇ ಇದೆ. ಈ ಬಾರಿ ಸಂಪುಟ ವಿಸ್ತರಣೆ ಮಾಡಲು ದಿನಾಂಕ ಹಾಗೂ ಸಮಯ ನಿಗಧಿಯಾಗಿತ್ತಾದರೂ ಸಹ ದೆಹಲಿಯಲ್ಲಿ ನಡೆದ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆ ವಿಕೋಪಕ್ಕೆ ಹೋದ ಪರಿಣಾಮ ದೆಹಲಿಯಲ್ಲಿ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರ ಜತೆ ನಡೆಯಬೇಕಿದ್ದ ಸಮಾಲೋಚನಾ ಸಭೆ ಮುಂದೂಡಲ್ಪಟ್ಟಿದೆ. ಮತ್ತೆ ಸಚಿವರ ಆಯ್ಕೆ ಸಂಬಂಧ ಈ ಸಭೆ ಯಾವಾಗ ನಡೆಯುತ್ತದೆ ಎಂಬುದು ಇನ್ನು ನಿಗಧಿಯಾಗಿಲ್ಲ. ಈಗಾಗಲೇ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಪ್ರಮುಖರಾದ ಕೆ.ಸಿವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರು ಯಾವಾಗ ಬೇಕಾದರೂ ಸಂಪುಟ ವಿಸ್ತರಣೆಯಾಗಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಕೆ.ಸಿ.ವೇಣುಗೋಪಾಲ್ ಸಹ ಇದೇ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಿಗ್ಗೆ ಸಚಿವಾಕಾಂಕ್ಷಿ ಶಾಸಕರು ಸಚಿವ ಪಟ್ಟಕ್ಕಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಅವರ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಯವರು ಇಂದು ಚಿತ್ರದುರ್ಗ ಜಿಲ್ಲಾಪ್ರವಾಸಕ್ಕೆ ಹೊರಡಬೇಕಾದರೂ ಅವರ ಪ್ರವಾಸ ಆರಂಭಕ್ಕೂ ಮುನ್ನವೇ ಅವರನ್ನು ಭೇಟಿಯಾದ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಮತ್ತಿತರರ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಯವರ ಮುಂದೆ ಕಿರಿಯ ಶಾಸಕರಿಗೆ ಅವರಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದಾರೆ. ತಮ್ಮ ಕರೆಗೆ ಓಗೊಟ್ಟು 20ಕ್ಕೂ ಹೆಚ್ಚು ಶಾಸಕರೂ ಸಿಎಂ ಅವರನ್ನು ಭೇಟಿಯಾಗಲು ಬಂದಿದ್ದರು ಎಂದು ಕಂಪ್ಲಿ ಗಣೇಶ್ ತಿಳಿಸಿದ್ದಾರೆ. ರಾಜ್ಯದ ಯುವಜನತೆಗೆ ಒಂದು ಮಹತ್ತರ ಸಂದೇಶ ಹೋಗಬೇಕು ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನಿನ್ನೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಸಂಪುಟ ವಿಸ್ತರಣೆ ಸಂಬಂಧ ಯಾವಾಗ ಬೇಕಾದರೂ ಯಾವ ಸಮಯದಲ್ಲಾದರೂ ದೆಹಲಿ ವರಿಷ್ಠರಿಂದ ಕರೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಾವು ಕಮ್ಮಿಯಾದ ನಂತರ ಸಹಜ ಸ್ಥಿತಿಗೆ ಬಂದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ವರಿಷ್ಠರಿಂದ ಬುಲಾವ್ ಬರಬಹುದು ಎಂಬ ರಾಜ್ಯ ಮುಖಂಡರು ಕಾಯುತ್ತಿದ್ದಾರೆ.
ಸಚಿವರಾಗಲು ತವಕ: ದೆಹಲಿ ವರಿಷ್ಠರ ಕರೆ ನಿರೀಕ್ಷೆಯಲ್ಲಿ ಮುಖಂಡರು



