ಚನ್ನಪಟ್ಟಣ: ಆದಿಚುಂಚನಗಿರಿ ಮಠ ರಾಷ್ಟ್ರ ಹಾಗೂ ರಾಜ್ಯ ಆಳುವವರನ್ನು ಸೃಷ್ಟಿ ಮಾಡುತ್ತದೆಯೇ ಹೊರತು, ರಾಜಕಾರಣ ಮಾಡುವುದಿಲ್ಲ. ಎಂದೂ ಕೂಡ ಆ ಆಲೋಚನೆ ಬೇಡ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲನಂದನಾಥ ಮಹಾಸ್ವಾಮೀಜಿ ತಿಳಿಸಿದರು.ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ನಡೆದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ಸಿಎಂ ಆಗುವ ಮುಂಚೆಯೇ ಅವರ ಮನೆತನ ರಾಜಕಾರಣದಲ್ಲಿದೆ. ಆದರೆ, ಆದಿಚುಂಚನಗಿರಿ ಮಠದ ಎಂದಾದರೂ ರಾಜ ಕಾರಣ ಪ್ರವೇಶ ಮಾಡಿದನ್ನು ನೋಡಿದ್ದೀರಾ? ಅವರಿಗೂ ನಮಗೂ ವ್ಯತ್ಯಾಸ ಇಷ್ಟೇ. ನಮ್ಮದು ಶುದ್ದ ಆಧ್ಯಾತ್ಮಿಕ ಮಠ. ರಾಜಕಾರಣದ ಕೊಂಚ ಸೊಕ್ಕು ಕೂಡ ಇಲ್ಲ ಎಂದರು.ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಸಿಎಂ ಆದಾಗ ಇಲ್ಲಿ ಯಾಕೆ ಚುಂಚನಗಿರಿ ಶ್ರೀಗಳು ಸಿಎಂ ಆಗಬಾರದು ಎಂಬ ಚರ್ಚೆ ಆರಂಭವಾಯಿತು. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಅದು ಅವರ ಪರಂಪರೆ. ಆದರೆ, ನಮ್ಮ ಪೀಠ ಕೇವಲ ಧಾರ್ಮಿಕ ಪರಂಪರೆಯ ಹಾದಿಯಲ್ಲಿ ಮಾತ್ರ ಸಾಗಿ ಬಂದಿದೆ. ಮುಂದೆ ಅದರ ದಾರಿಯಲ್ಲಿಯೇ ಶ್ರೀ ಮಠ ಸಾಗುತ್ತದೆ ಎಂದರು.ನಾಥ ಪರಂಪರೆಯನ್ನು ಸಾರುತ್ತಿರುವ ಜೋಗಪ್ಪಗಳು ಕಾಲಬೈರವನ ಮಕ್ಕಳು. ನೀವುಗಳು ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ ಜೊತೆಜೊತೆಗೆ, ಜನರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಬೇಕು. ಶ್ರೀ ಮಠಕ್ಕೆ ಜೋಗಪ್ಪಗಳು ಅಡಿಪಾಯ. ಕೇವಲ ತಮ್ಮ ಕುಟುಂಬದ ಹಿರಿಮಗನಿಗೆ ಕಿವಿ ಚುಚ್ಚಿಸಿ ಜೋಗಪ್ಪನನ್ನು ಬಿಡುವುದಷ್ಟೇ ನಿಮ್ಮ ಕೆಲಸವಲ್ಲ. ನಿಮ್ಮ ಮಕ್ಕಳನ್ನು ಮಠಕ್ಕೂ ತಂದು ಬಿಡಿ ಎಂದು ಕರೆನೀಡಿದರು.ಅಹಂಕಾರ ಎಂಬುದು ದೊಡ್ಡ ಕ್ಯಾನ್ಸರ್. ಅಹಂಕಾರ ಎಂಬುದು ವ್ಯಕ್ತಿಗೆ ಅಂಟಿದ ದೊಡ್ಡ ಶಾಪ. ಅಹಂಕಾರವೆAಬುದು ಮನುಷ್ಯನನ್ನು ಭಗವಂತನಿಂದ ದೂರ ಮಾಡುತ್ತದೆ. ಕ್ಯಾನ್ಸರ್ ಗುಣಪಡಿಸಬಹುದು. ಆದರೆ, ಅಹಂಕಾರ ತಲೆಗೇರಿದರೆ ಗುಣಪಡಿಸುವುದು ಕಷ್ಟಸಾಧ್ಯ. ಮನಸ್ಸು ಶುದ್ದವಾಗಿರಬೇಕು. ಹಾಗಾದರೆ ಮಾತ್ರ ಬದುಕಿಗೊಂದು ಅರ್ಥ ಎಂದರು.ಕ್ಷೇತ್ರವನ್ನು ಕೊಂಡಾಡಿದ ಶ್ರೀಗಳು!ಈ ಕ್ಷೇತ್ರದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿಯ ಮಹಿಮೆಗೆ ಇಲ್ಲಿಗೆ ಬರುವ ಭಕ್ತರೇ ಸಾಕ್ಷಿ. ಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ಗೂರೂಜೀ ಯವರ ಬಹಳ ಶ್ರಮಪಟ್ಟ ಅದ್ಭುತ ಕ್ಷೇತ್ರ ನಿರ್ಮಾಣ ಮಾಡಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿರುವುದು ನನಗೆ ಸಂತಷ ತಂದಿದೆ. ಕಾರ್ಯಕ್ರಮದ ಅಂಗವಾಗಿ ಕಾಲಬೈರವನ ಆರಾಧಕರಾದ ಜೋಗಿಗಳ ಸಮಾವೇಶ ನಡೆಸಿರುವುದು ಉತ್ತಮ ಕಾರ್ಯ. ಶುಭ ಭಾನುವಾರ ಇಷ್ಟೊಂದು ಪ್ರಮಾಣದ ಜೋಗಪ್ಪಂದಿರ ದರ್ಶನ ಮಾಡಿದ್ದು ಸಂತಷ ತಂದಿದೆ ಎಂದರು. ಇದರೊಂದಿಗೆ, ಶ್ರೀ ಕ್ಷೇತ್ರವನ್ನು ಕೊಂಡಾಡಿದ ಶ್ರೀಗಳು, ದೇವಾಲಯ ನಿರ್ಮಾಣ, ವಾಸ್ತುಶಿಲ್ಪ ಹಾಗೂ ತಾಯಿಯ ಬೃಹತ್ ಪ್ರತಿಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿರುವ ಪರಂಪರೆ ಮ್ಯೂಜಿಯಂ ಅನ್ನು ವೀಕ್ಷಣೆ ಮಾಡಿದ ಅವರು, ಮ್ಯೂಜಿಯಂನಲ್ಲಿರುವ ಬಾಲಗಂಗಾಧರನಾಥ ಸ್ವಾಮಿಜೀ ಸೇರಿದಂತೆ ವಿವಿಧ ಪ್ರತಿಮೆಗಳನ್ನು ಕಂಡು ಸಂತಷ ವ್ಯಕ್ತಪಡಿಸಿದರು. ತಮ್ಮದೇ ಮೂರ್ತಿ ಕಂಡು ಪುಳಂಕಿತಗೊAಡರು.ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮಿಜೀ ಮಾತನಾಡಿ, ಗೌಡಗೆರೆ ಕ್ಷೇತ್ರಕ್ಕೆ ಶ್ರೀಗಳು ಆಗಮಿಸಬೇಕು ಎಂಬುದು ಎಲ್ಲರ ಆಶಯವಾಗಿತ್ತು. ಈ ದಿನ ಆ ಆಶಯ ಈಡೇರಿದೆ. ಚುಂಚನಗಿರಿ ಮಠ ಬೇರೆ ಅಲ್ಲ ಗೌಡಗೆರೆ ಕ್ಷೇತ್ರ ಬೇರೆಯಲ್ಲ ಎಂದರು.ಈ ವೇಳೆ ಗೌಡಗೆರೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ, ಹಾಸನ ಮಠದ ಶ್ರೀ ಶಂಭೂನಾಥ ಮಹಾಸ್ವಾಮಿ, ನಾರಾಯಣ ಧಾಮದ ಶ್ರೀ ಸಾಯಿಕೀರ್ತಿನಾಥ ಸ್ವಾಮಿ, ಮಂಡ್ಯದ ಸಂಕೀರ್ತಿನಾಥ ಸ್ವಾಮಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಜೀ, ಬಸವನಂದ ಸ್ವಾಮಿಜೀ, ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್.ಸಿ.ಜಯಮುತ್ತು, ಚಕ್ಕೆರೆ ವೆಂಕಟರಾಮೇಗೌಡ, ಜಿಪಂ ಮಾಜಿ ಸದಸ್ಯ ಸಿ.ಪಿ.ರಾಜೇಶ್, ಮುಖಂಡರಾದ ರಮೇಶ್ ಗೌಡ, ಗೋವಿಂದನಹಳ್ಳಿ ನಾಗರಾಜು, ರಾಂಪುರ ಧರಣೇಶ್, ಸಿ.ಪುಟ್ಟಸ್ವಾಮಿ, ಗರಕಹಳ್ಳಿ ಕೃಷ್ಣೇಗೌಡ, ರಾಧಿಕಾರವಿಕುಮಾರ್ ಗೌಡ, ಕ್ಷೇತ್ರದ ಜಿ.ಬಿ. ಬಾಬು, ರಾಮಕೃಷ್ಣಪ್ಪ, ಚಂದು, ಯಶವಂತ್, ದೀಪಕ್, ಮೋಹನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



