ಬೆಂಗಳೂರು: ಕ್ಷುಲಕ ಕಾರಣಕ್ಕೆ ಸ್ಕೂಟರ್ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವರ್ತೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ. ಮೇ 17ರಂದು ಸರ್ಜಾಪುರ ರಸ್ತೆಯಲ್ಲಿ ನಡೆದ ಹಲ್ಲೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿ ದೂರು ನೀಡಲಾಗಿದ್ದು, ಇದರಲ್ಲಿ ಸ್ಕೂಟರ್ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ.ಕೇರಳ ಮೂಲದ ಅಖಿಲ್ ಸಾಬು ಎಂಬವರು ಸರ್ಜಾಪುರ ರಸ್ತೆಯಲ್ಲಿ ಅನುಭವಿಸಿದ ಯಾತನೆಯನ್ನು ನಗರ ಪೊಲೀಸರು, ಗೃಹ ಸಚಿವರಿಗೆ ಎಕ್ಸ್ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಕಾರಿನ ಎಡಭಾಗದ ಕಿಟಕಿಯನ್ನು ಆರೋಪಿ ಹೆಲ್ಮೆಟ್ನಿಂದ ಒಡೆದುಹಾಕಿದ್ದಾನೆ. ಆಗ ಕಾರಿನಲ್ಲಿದ್ದ ಅಖಿಲ್ ಪತ್ನಿ ಹಾಗೂ ಮಗುವಿನ ಕೈಗೆ ಗಾಯವಾಗಿದೆ.
ಇದನ್ನು ಪ್ರಶ್ನೆ ಮಾಡಿದ ಅಖಿಲ್ ಮೇಲೂ ಹಲ್ಲೆ ಎಸಗಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಜಗದೀಶ್ ಎಂಬಾತನ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.