ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಆದರೆ ಜಿಲ್ಲೆಯ ಮೂರು ಕಡೆ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಮುಂಜಾನೆ ಹತ್ತು ಗಂಟೆಯಾದರು ಕೂಡ…ಒಬ್ಬನೇ ಒಬ್ಬ ಮತದಾರ ಕೂಡ ಮತಗಟ್ಟೆಗೆ ಆಗಮಿಸಿ ಮತ ಹಾಕಿಲ್ಲ. ಹೀಗಾಗಿ ಮೂರು ಕಡೆ, ಬೂತ್ ಗಳು ಮತದಾರರು ಇಲ್ಲದೇ ಬಿಕೋ ಅಂತಿವೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಪಟ್ಟಣದ ವಾರ್ಡ್ 18ರ ನಿವಾಸಿಗಳು ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಕಳೆದ ವಾರ ವಿಠಲಾಪುರ ಬಡಾವಣೆ ನಿವಾಸಿಯಾಗಿದ್ದ ಲಕ್ಷ್ಮಿ ಅನ್ನೋ ಗರ್ಭಿಣಿ ಮಹಿಳೆ ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಳು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದರು. ಆದರೆ ಒಂದು ವಾರವಾದ್ರು ಕೂಡಾ ತಪ್ಪಿತಸ್ಥ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಮತದಾನ ಮಾಡ್ತೇವೆ ಅಂತ ಬಡಾವಣೆ ನಿವಾಸಿಗಳು ಹೇಳ್ತಿದ್ದಾರೆ.