ಬೆಂಗಳೂರು: ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಒಂದಲ್ಲ ಒಂದು ಕಾರಣಕ್ಕೆ ಮುಂದೂಡಲ್ಪಡುತ್ತಿರುವ ಜಿಬಿಎ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆದಿದೆ. ಚುನಾವಣಾ ಆಯೋಗದವರು ಕೋರ್ಟ್ ನಿರ್ದೇಶನದಂತೆ ನಿಗದಿತ ಗಡುವಿನೊಳಗೆ ಚುನಾವಣೆ ನಡೆಸಲು ಮುಂದಾಗಿದ್ದಾರೆ.
ಇದೀಗ ರಾಜ್ಯದಲ್ಲಿ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದರೂ ಸಹ ಚುನಾವಣೆಯನ್ನು ಮಾಡಲು ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಬಿಬಿಎಂಪಿ ಹೆಸರಿನಲ್ಲಿದ್ದ ಪಾಲಿಕೆಯನ್ನು ಜಿಬಿಎ ಎಂದು ಬದಲಿಸಿ ಐದು ಪಾಲಿಕೆಗಳನ್ನಾಗಿ ವಿಂಗಡಿಸಿ 369 ವಾರ್ಡ್ಗಳನ್ನು ರಚಿಸಲಾಗಿದೆ.ಈ ಎಲ್ಲಾ ವಾರ್ಡ್ಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಿದ್ಧತಾ ಕಾರ್ಯಗಳನ್ನು ನಡೆಸಿವೆ. ಐದು ಪಾಲಿಕೆಗಳನ್ನು ತನ್ನ ತೆಕ್ಕೆಗೆ ಪಡೆಯಲು ನಾ ಮುಂದು ತಾ ಮುಂದು ಪೈಪೋಟಿ ನಡೆಸುತ್ತಿವೆ.
ಪ್ರತಿಯೊಂದು ವಾರ್ಡ್ಗೂ ವಾರ್ಡ್ವಾರು ಸಭೆ ನಡೆಸಿ ಚುನಾವಣೆಗೆ ಸ್ಪರ್ಧೆಗಿಳಿಯಬೇಕಾದ ತನ್ನ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಈ ಎಲ್ಲದರ ಮಧ್ಯೆ ದೆಹಲಿಯಲ್ಲಿ ಮೊದಲ ಅಸ್ಥಿತ್ವಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷವೂ ಸಹ ಜಿಬಿಎ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಚಿಂತನೆ ನಡೆಸುತ್ತಿದ್ದು, ಆಪಕ್ಷವೂ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಒಟ್ಟಾರೆ ಜಿಬಿಎ ಚುನಾವಣೆಗೆ ಚುನಾವಣಾ ಅಧಿಕಾರಿಗಳು ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಿಬಿಎ ಚುನಾವಣೆ ನಡೆಸಲು ಸಿದ್ಧತೆ?



