ಬೆಂಗಳೂರು/ದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಇಂದು ದೆಹಲಿಯಲ್ಲಿ ರಾಜ್ಯ ನಾಯಕರು ಹಾಗೂ ಪಕ್ಷದ ವರಿಷ್ಠರು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿದ್ದರೂ ಸಂಪುಟ ಪುನರ್ ರಚನೆ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮೂವರು ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ ಒಂದು ಗಂಟೆ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯದ ನಾಯಕರು ಕೊಂಡೊಯ್ದಿರುವ ಸಂಭಾವ್ಯ ಸಚಿವರ ಹೆಸರುಗಳ ಪಟ್ಟಿಯನ್ನು ಪರಾಮರ್ಶೆ ಮಾಡಲಿದ್ದಾರೆ. ಈ ಮೂವರು ನಾಯಕರು ನೀಡಿರುವ ಪಟ್ಟಿಯನ್ನು ಅವಲೋಕಿಸುವ ಖರ್ಗೆ ಅವರು ಸಂಜೆ ವೇಳೆಗೆ ರಾಹುಲ್ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ವರಿಷ್ಠರು ಸಂಪುಟ ಪುನರ್ ರಚನೆ ಸಂಬAಧ ಯಾವ ನಿಲುವು ಹೊಂದಿದ್ದಾರೆ ಎಂಬುದು ಇದುವರೆಗೂ ಯಾರಿಗೂ ತಿಳಿದುಬಂದಿಲ್ಲ. ಸಂಪುಟದಲ್ಲಿ ಶೇ.60ರಷ್ಟು ಹೊಸಬರಿಗೆ ಹಾಗೂ ಯುವಕರಿಗೆ ಆದತ್ಯೆ ನೀಡುವ ನಿಲುವು ರಾಹುಲ್ಗಾಂಧಿ ಅವರದ್ದು ಎಂಬುದು ಹೇಳಲಾಗುತ್ತಿದೆ. ಹೊಸಬರನ್ನೇ ಸೇರ್ಪಡೆ ಮಾಡಿಕೊಂಡು ಸಂಪುಟ ಪುನರ್ ರಚನೆ ಮಾಡಿದರೆ ಹಳೆಬರನ್ನು ನಿರ್ಲಕ್ಷಿಸಿದಂತಾಗುತ್ತದೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ಹಲವರ ಮಾರ್ಗದರ್ಶನವೂ ಬೇಕಾಗುತ್ತದೆ. ಹಾಗಾಗಿ ಹಳಬರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬ ವಾದ ರಾಜ್ಯ ನಾಯಕರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ಸೇರಲು ಹೊಸಬರು ಸೇರಿದಂತೆ ಬಹುತೇಕ ಹಳಬರು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಸೇರಿದಂತೆ ಕೆಲವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿಬರುತ್ತಿದೆ. ಶಾಸಕರಾದ ಅಶೋಕಪಟ್ಟಣ, ಹಂಪನಗೌಡ ಬಾದರ್ಲಿ, ಅಪ್ಪಾಜಿ ನಾಡಗೌಡ, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಮುಸ್ಲಿಂ ಕೋಟದಲ್ಲಿ ತನ್ವೀರ್ಸೇಠ್, ಸಲೀಂ ಅಹಮ್ಮದ್, ರಿಜ್ವಾನ್ ಹರ್ಷದ್, ಜಮೀರ್ ಅಹಮ್ಮದ್, ಖನೀಜ್ ಫಾತೀಮಾ ಅವರ ಹೆಸರು ಕೇಳಿಬರುತ್ತಿವೆ. ಲಕ್ಷ್ಮಣ ಸವದಿ, ಕೆ.ಎಂ. ಶಿವಲಿಂಗೇಗೌಡ, ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ರಮೇಶ್ ಬಂಡಿ ಸಿದ್ದೇಗೌಡ, ಶರತ್ಬಚ್ಚೇಗೌಡ, ಅವರು ಸಹ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಮಹಿಳಾ ಕೋಟಾದಲ್ಲಿ ಲಕ್ಷ್ಮೀಹೆಬ್ಬಾಳ್ಕರ್, ಉಮಾಶ್ರೀ, ನಯನಾ ಮೋಟಮ್ಮ, ಆರತಿ ಕೃಷ್ಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಿಂದುಳಿದ ವರ್ಗಗಳ ಕೋಟಾದಡಿ ಬೇಳೂರು ಗೋಪಾಲ್ ಕೃಷ್ಣ, ಮಂಕಾಳು ವೈದ್ಯ, ಅಜಯ್ ಸಿಂಗ್ ಸೇರಿದಂತೆ ಹಲವರು ಪ್ರಯತ್ನ ನಡೆಸುತ್ತಿದ್ದು, ಬಹುತೇಕ ಇವರೆಲ್ಲರೂ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕಡೆ ಗಳಿಗೆ ಯತ್ನ ನಡೆಸಿದ್ದಾರೆ. ಇಂದು ರಾತ್ರಿವೇಳೆಗೆ ಅಂತಿಮ ಪಟ್ಟಿ ಸಿದ್ಧವಾದರೆ ಈ ಪಟ್ಟಿಗೆ ಎಲ್ಲರೂ ಸಮ್ಮತಿ ಸೂಚಿಸಿದರೇ ಬಹುತೇಕ ಈ ತಿಂಗಳ 24 ಶುಕ್ರವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬರುತ್ತದೆ.
ವರಿಷ್ಠರ ನಡೆ ನಿಗೂಢ ದೆಹಲಿಯಲ್ಲಿ ನಡೆದಿದೆ ಸಂಪುಟ ಪುನರ್ ರಚನೆಯ ಕಸರತ್ತು



