ದಾವಣಗೆರೆ: ನಗರದ ಮೇಲಿನ ನೀರಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಕಚೇರಿ ಹಾಗೂ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಆಳವಡಿಸಿಕೊಳ್ಳುವುವುದ ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಿಳಿಸಿದರು.ಅವರು ಜಿಲ್ಲಾಡಳಿತ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ನೆಲ-ಜಲ, ಪರಿಸರ ವೃದ್ಧಿಸಲು, ಮಳೆ ನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಧಿಕಾರಿಗಳು ತಾವಿರುವ ಸ್ಥಳಗಳಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಮಾದರಿಯಾಗಬೇಕು, ನಮ್ಮ ಜಿಲ್ಲೆಯಾದ್ಯಂತ ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮುಂಬರುವ ಜೂನ್ 6 ರಂದು ಕುಂದುವಾಡ ಕೆರೆ ಆವರಣದಲ್ಲಿ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಸುಮಾರು 250 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನೆಟ್ಟ ಸಸಿಗಳ ರಕ್ಷಣೆಯ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಈ ಎಲ್ಲಾ ಪರಿಸರಸ್ನೇಹಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಾರ್ವಜನಿಕ ವಲಯದಲ್ಲಿ ಪರಿಸರ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರೇರಣಾದಾಯಕವಾಗಿವೆ ಎಂದು ತಿಳಿಸಿದರು.
ನಗರದಲ್ಲಿ ಕನಿಷ್ಠ ಒಂದು ವಾರ್ಡ್ ಅನ್ನಾದರೂ ಸರ್ವತೋಮುಖವಾಗಿ ಮಾದರಿ ವಾರ್ಡ್ ಆಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ, ಮಾದರಿ ವಾರ್ಡ್ನ ಕಲ್ಪನೆ, ಸ್ವಚ್ಛ ಗ್ರಾಮ, ಸ್ವಚ್ಛ ವಾರ್ಡ್ ನಿರ್ವಹಣೆ ಮತ್ತು ಸಸಿ ನಡುವ ಕಾರ್ಯಕ್ರಮಗಳ ಕುರಿತು ಸಮಗ್ರ ರೂಪರೇಷುಗಳನ್ನು ಸಿದ್ದಪಡಿಸಲಾಗುತ್ತಿದೆ. ವಾರ್ಡ್ಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಸಂಗ್ರಹವಾಗದAತೆ ತಡೆದು, ಸಾರ್ವಜನಿಕರ ಸಾಮೂಹಿಕ ಬಳಕೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ತರಕಾರಿ ಗಿಡ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸುವ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ ಎಂದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 11.89 ಮೀಟರ್ ಇದ್ದು ಪ್ರಸಕ್ತ ಅದು 2.29 ಮೀಟರ್ ಗಳಷ್ಟು ಕುಸಿದಿದೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4.89 ಮೀಟರ್ಗಳಷ್ಟು ಅಂತರ್ಜಲ ಮಟ್ಟ ಕುಸಿದಿರುವುದು ಆತಂಕಕಾರಿ ಸಂಗತಿಯಾಗಿದೆ. ಕುಂದುವಾಡ ಕೆರೆಗೆ ಮುಂದಿನ 2-3 ತಿಂಗಳು ನೀರು ಬರುವ ಸಾಧ್ಯತೆ ಇಲ್ಲದಿರುವುದರಿಂದ ಲಭ್ಯವಿರುವ ನೀರನ್ನೇ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.ರೈತರು ಪ್ರತಿವರ್ಷ ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಮತ್ತು ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ರೈತರು ಪರ್ಯಾಯ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಂಪೂರ್ಣ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ ಮತ್ತು ಜಿಲ್ಲಾ ಪಂಚಾಯಿತಿ ಕಟ್ಟಡದ ಅರ್ಧದಷ್ಟು ಭಾಗಕ್ಕೆ ಸೌರಶಕ್ತಿ ಸಂಪರ್ಕ ಕಲ್ಪಿಸಲಾಗಿದ್ದು, ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಸರಬರಾಜು ಮಾಡಲಾಗುತ್ತಿದೆ. ಎಸ್.ಪಿ ಕಚೇರಿಯ ಲಭ್ಯವಿರುವ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇದೇ ಮಾದರಿಯನ್ನು ಜಿಲ್ಲೆಯ ಎಲ್ಲಾ ಇಲಾಖೆಗಳು ಹಾಗೂ ಅಧಿಕಾರಿಗಳು ತಮ್ಮ ಸ್ವಂತ ಮನೆಗಳಲ್ಲೂ ಅಳವಡಿಸಿಕೊಂಡು ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ವಸತಿನಿಲಯಗಳು, ಸರ್ಕಾರಿ ಕಚೇರಿಗಳು, ಕಲ್ಯಾಣ ಮಂಟಪ ಮತ್ತು ಅತಿಥಿಗೃಹಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.ದೇವರಾಜ ಅರಸು ಬಡಾವಣೆಯ ರೈಲ್ವೇ ಹಳಿ ಪಕ್ಕದ ಬಫರ್ ವಲಯದಲ್ಲಿ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಉತ್ತಮ ಉದ್ಯಾನವನ ನಿರ್ಮಿಸಿದ್ದಾರೆ. ಈ ಹಿಂದೆ ಆತ್ಮಹತ್ಯೆಗಳ ತಾಣವಾಗಿದ್ದ ಈ ಕಪ್ಪು ಚುಕ್ಕೆ ಪ್ರದೇಶವನ್ನು ಈಗ ಸುಂದರ ಪಾರ್ಕ್ ಆಗಿ ಪರಿವರ್ತಿಸಲಾಗಿದ್ದು, ಸಾರ್ವಜನಿಕರ ಜಾಗೃತಿಯಿಂದಾಗಿ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ: ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 36 ಕೆರೆ ಮತ್ತು ಕುಂಟೆಗಳ ನಿರ್ಮಾಣ ಹಾಗೂ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ವರ್ಷವೂ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತಷ್ಟು ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಮುದ್ದಪ್ಪನ ಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಸದರಿ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಾವುದೇ ಕ್ರಮವಹಿಸಿಲ್ಲ ಎಂದು ಪರಿಸರವಾದಿ ಬಲ್ಲೂರು ರವಿಕುಮಾರ್ ಅವರು ಸಭೆಯ ಗಮನಕ್ಕೆ ತಂದರು. ಮುದ್ದಪ್ಪನ ಕೆರೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕೆರೆಯ ಅಭಿವೃದ್ಧಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯಲಿದೆ. ಇದರಿಂದ ಸುಮಾರು ಪ್ರಾಣಿ ಪಕ್ಷಿಗಳಿಗೆ ನೀರು ಆಹಾರ ಸಿಗಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ಮಾತನಾಡಿ ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಹೆಚ್ಚಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ *ಮೆಮೊರಿ ಟ್ರೀ’ (ಸ್ಮರಣಾರ್ಥ ಗಿಡ) ಎಂಬ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ತಮ್ಮ ಕುಟುಂಬದ ಹಿರಿಯರು ಅಥವಾ ಮರಣ ಹೊಂದಿದವರ ಸವಿನೆನಪಿನಲ್ಲಿ ಸಾರ್ವಜನಿಕರು ಗಿಡಗಳನ್ನು ನೆಡಬಹುದು. ಈ ಗಿಡಗಳಿಗೆ ಅವರ ಹೆಸರಿನ ಫಲಕವನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಗಿಡಗಳ ಮೇಲಿನ ಭಾವನಾತ್ಮಕ ಸಂಬAಧ ಹೆಚ್ಚಲಿದ್ದು, ಗಿಡಗಳ ರಕ್ಷಣೆಯೂ ಸುಲಭವಾಗುತ್ತದೆ. ಹುಟ್ಟುಹಬ್ಬದ ನೆನಪಿಗಾಗಿಯೂ ಇಂತಹ ಗಿಡಗಳನ್ನು ನೆಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ನಗರದಲ್ಲಿ ತೆಂಗಿನ ಗರಿಗಳು, ಅಡಿಕೆ ಸಿಪ್ಪೆ ಹಾಗೂ ಒಣಗಿದ ರೆಂಬೆಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿರುವುದನ್ನು ಪರಿಸರವಾದಿ ಈಶ್ವರಯ್ಯ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಇಂತಹ ತ್ಯಾಜ್ಯಗಳನ್ನು ಸುಲಭವಾಗಿ ಪುಡಿ ಮಾಡುವ ಯಂತ್ರಗಳನ್ನು ಖರೀದಿಸಿ, ಅವುಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಈ ಯಂತ್ರಗಳ ನಿರ್ವಹಣೆಯ ಜವಾಬ್ದಾರಿ
ಯನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸುವುದರಿಂದ ಅವರಿಗೆ ಸ್ವಯಂ ಉದ್ಯೋಗಾವಕಾಶ ದೊರೆಯುವುದಲ್ಲದೆ, ಯಂತ್ರದಿAದ ಉತ್ಪಾದನೆಯಾಗುವ ಪುಡಿಯನ್ನು ಅತ್ಯುತ್ತಮ ಗೊಬ್ಬರವನ್ನಾಗಿ ಪರಿವರ್ತಿಸಿ ಮರುಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದರು.ಸಭೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್.ಟಿ. ಶೇಖರ್, ದುಡಾ ಆಯುಕ್ತೆ ರೇಣುಕ,
ಮಹಾನಗರ ಪಾಲಿಕೆ ರೆವಿನ್ಯೂ ಆಯುಕ್ತ ಉದಯ್, ಡಿಡಿಪಿಯು ಪಳಿನಿವೇಲು, ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಎಲ್ಲರೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ



