ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ.ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರನ್ನೇ ಕೇಳಿ ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್ ರೆಡಿಯಾಗಿರುತ್ತೆ. ಆ ಪೈಕಿ ”ದಿ ಕೇರಳ ಸ್ಟೋರಿ” ಕೂಡ ಒಂದು.ಹೌದು, 2023ರಲ್ಲಿ ಬಂದ ”ದಿ ಕೇರಳ ಸ್ಟೋರಿ” ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಬಾಕ್ಸಾಫೀಸ್ನ ಅಂಕಿ ಅಂಶ ಹಂಚಿಕೊಳ್ಳುವ ”ಸ್ಯಾಕ್ನಿಲ್” ಪ್ರಕಾರ 300 ಕೋಟಿ + ಹಣ ದೋಚಿತ್ತು. ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆ `ದಿ ಕೇರಳ ಸ್ಟೋರಿ’ ಫ್ರಾಂಚೈಸಿಯ ಉಗಮಕ್ಕೂ ಕಾರಣವಾಯ್ತು. ಆ ನಂತರ ಬಂದಿದ್ದೇ ” ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್”. ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 27ರಂದು ತೆರೆಗೆ ಬಂದ ” ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್” ಚಿತ್ರದ ಮೇಲೆಯೂ ಕೂಡ ವಿವಾದದ ನೆರಳು ಬಿದ್ದಿತ್ತು. ಪ್ರೊಪಗಂಡಾ ಸಿನಿಮಾ ಎಂದು ಒಂದು ವರ್ಗ ಕರೆಯಿತು. ಆದರೆ, ಬಾಕ್ಸಾಫೀಸ್ನಲ್ಲಿ ಇದರ ಪರಿಣಾಮವೇನು ಆಗಲಿಲ್ಲ. ಬದಲಿಗೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಪ್ರಚಾರ ಸಿಕ್ಕಿತ್ತು. ಇದರ ಪರಿಣಾಮ ರೂ.25-30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ” ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್” 60 ಕೋಟಿಯನ್ನು ಗಳಿಸಿತು. ಸದ್ಯ ಈ ಚಿತ್ರ ಬಿಡುಗಡೆಯಾಗಿ 57 ದಿನಗಳಾಗಿವೆ. ಓಟಿಟಿಯಲ್ಲಿ ಈ ಚಿತ್ರದ ಪ್ರಸಾರಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.ಹೌದು, ಸಾಮಾನ್ಯವಾಗಿ ಬದಲಾದ ಈ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರಕ್ಕೆ ಬಂದು ನಾಲ್ಕು ವಾರ ಕಳೆದಿರುವುದಿಲ್ಲ. ಆದರೆ ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದು ಬಿಡುತ್ತೆ. ” ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್” ಕೂಡ ಬಂದಿದೆ. ಆದರೆ ನಾಲ್ಕು ವಾರಕ್ಕೆ ಅಲ್ಲ ಬದಲಿಗೆ 62 ದಿನಗಳ ನಂತರ ಅನ್ನೋದು ವಿಶೇಷ. ಚಿತ್ರ ಇದೇ ಮೇ 1ರಿಂದ ಓಟಿಟಿಯಲ್ಲಿ ಪ್ರಸಾರವಾಗಲಿದೆ.ಎಲ್ಲಿ ನೋಡಬಹುದು ?
ಬಾಕ್ಸಾಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ”ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್” ಇದೇ ಮೇ 1ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ. ಚಿತ್ರದ ಅವಧಿ 2 ಗಂಟೆ 11 ನಿಮಿಷಗಳಿದ್ದು ಹಿಂದಿ ಭಾಷೆಯಲ್ಲಿ ನೋಡುವ ಅವಕಾಶ ಇದೆ. ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿದೆಯಾ.. ಎನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲ. ಒಟ್ನಲ್ಲಿ ಸದ್ಯ ”ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್” ಓಟಿಟಿ ಅಂಗಳಕ್ಕೆ ಬರುತ್ತಿದ್ದು, ಚಿತ್ರಮಂದಿರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದ ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಲಿದೆ. ಓಟಿಟಿಯಲ್ಲಿ ಈ ಚಿತ್ರವನ್ನು ನೋಡಿದವರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.



