ವಾಷಿಂಗ್ಟನ್: ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದದಿರಲು ಒಪ್ಪಿಕೊಂಡಿದೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ಗೆ 28.38 ಲಕ್ಷ ಕೋಟಿ ರೂ. ಪರಿಹಾರ ನೀಡಲು ನಾವು ಒಪ್ಪಿಕೊಂಡಿದ್ದೇವೆ ಅನ್ನೋದು ಸುಳ್ಳು ಎಂದು ಹೇಳಿದ್ದಾರೆ.
ಶಾಂತಿ ಒಪ್ಪಂದದಲ್ಲಿ ಹಣದ ಮಾತುಕತೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಇರಾನ್ಗೆ ಅಮೆರಿಕ 28.38 ಲಕ್ಷ ಕೋಟಿ ರೂ. ಪಾವತಿಸಲಿದೆ ಎಂಬುದು ಡೆಮಾಕ್ರಟಿಕ್ ಪಕ್ಷದ ಮುಖಂಡರು ಹರಡಿರುವ ಸುಳ್ಳು ಸುದ್ದಿಯಾಗಿದೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಷಿಯಲ್ ನಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ನಿಲುವನ್ನು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಬೆಂಬಲಿಸಿದ್ದು, `ಟ್ರಂಪ್ ಅವರ ರಾಜತಾಂತ್ರಿಕ ಪ್ರಯತ್ನಗಳು ಮತ್ತೊಮ್ಮೆ ಫಲ ನೀಡಿವೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನ ಅಭಿವೃದ್ಧಿಪಡಿಸದಂತೆ ತಡೆಯುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಟ್ರಂಪ್ ಅವರು ಮೊದಲ ದಿನದಿಂದಲೂ ಹೇಳುತ್ತಾ ಬಂದಿದ್ದಾರೆ. ಅಮೆರಿಕ ಮತ್ತು ಟ್ರಂಪ್ ಅವರನ್ನು ದ್ವೇಷಿಸುವವರು ಶಾಂತಿ ಒಪ್ಪಂದ ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ ಹೊರತಾಗಿಯೂ, ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಟ್ರಂಪ್ ಅವರ ಪ್ರಯತ್ನಗಳು ದೇಶದ (ಅಮೆರಿಕ) ಜನರಿಗೆ ಮತ್ತೊಮ್ಮೆ ಲಾಭ ತಂದುಕೊಟ್ಟಿವೆ ಎಂದು ವ್ಯಾನ್ಸ್ ತಿಳಿಸಿದ್ದಾರೆ.
ಇರಾನ್ಗೆ 28 ಲಕ್ಷ ಕೋಟಿ ಪರಿಹಾರ ನೀಡಲು ಒಪ್ಪಿಲ್ಲ: ಡೊನಾಲ್ಡ್ ಟ್ರಂಪ್



