ಬೆಂಗಳೂರು: ಕಳೆದ ಡಿಸೆಂಬರ್ 4ರ ರಾತ್ರಿ ಪೀಣ್ಯದಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ, 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ ಪೊಲೀಸ್ ಠಾಣೆಯ ಹೆಚ್ಎಂಟಿ ಲೇಔಟ್ನಲ್ಲಿ ಇರುವ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು.ರಾತ್ರಿ 7.30ರ ಸುಮಾರಿಗೆ ಮನೆಯಲ್ಲಿ ಉದ್ಯಮಿ ಮನೋಹರ್ ಅವರು ಇಲ್ಲದ ವೇಳೆ ಯಾರೋ ಬಾಗಿಲು ತಟ್ಟಿದ್ದಾರೆ. ಮನೆಯಲ್ಲಿ ಮನೋಹರ್ ಅವರ ಪತ್ನಿ ಸುಜಾತ ಮತ್ತು ಮಗ ರೂಪೇಶ್ ಇದ್ದರು. ಬಾಗಿಲು ಬಡಿದ ವ್ಯಕ್ತಿ ತಾನು ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾನೆ.
ಮನೋಹರ್ ಅವರ ಕುಟುಂಬದಲ್ಲಿ ಅಣ್ಣ-ತಮ್ಮರ ಜಗಳವಿದ್ದು, ಅದಕ್ಕೆ ಸಂಬಂಧಿಸಿ ಪೊಲೀಸರು ಬಂದಿರಬಹುದು ಎಂದು ರೂಪೇಶ್ ಭಾವಿಸಿದ್ದರು. ಅವರು ಬಾಗಿಲು ತೆರೆಯುತ್ತಿದ್ದಂತೆಯೇ ಸುಮಾರು ಐದಾರು ಮಂದಿ ಒಮ್ಮಿಂದೊಮ್ಮೆಗೆ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿದ್ದರು. ಬಂದವರೇ ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದರು. ಸುಜಾತಾ ಅವರಿಗೂ ಗಾಯಗಳಾಗಿದ್ದವು.