ಕಲ್ಯಾಣಿ ಪ್ರಿಯದರ್ಶನ್ .. ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಕಥೆಯನ್ನಾಧರಿಸಿದ ”ಲೋಕ : ಚಾಪ್ಟರ್ 1” ಚಿತ್ರದ ಮೂಲಕ ಎಲ್ಲರನ್ನು ನಿಬ್ಬೇರಗಾಗಿಸಿದ ಚೆಲುವೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ 300 ಕೋಟಿ ಹಣವನ್ನು ಕೊಳ್ಳೆ ಹೊಡೆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕಿದೆ. 2017ರಲ್ಲಿ ”ಹಲೋ” ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಲ್ಯಾಣಿ ಇಲ್ಲಿಯವರೆಗೆ 3 ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 2 ಸೂಪರ್ ಹಿಟ್ ಮತ್ತೊಂದು ಹಿಟ್ ಚಿತ್ರಗಳನ್ನು ಕೂಡ ನೀಡಿದ್ದಾರೆ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಾರೆ. ನಿಜಾ, ಕಲ್ಯಾಣಿ ಅವರ ತಂದೆ ಬೇರೆ ಯಾರು ಅಲ್ಲ, ಬದಲಿಗೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ಮಗಳು. ಇವರ ತಾಯಿ ಲಿಸ್ಸಿ ಲಕ್ಷ್ಮೀ ರಕ್ತದಲ್ಲಿ ಕೂಡ ಕಲೆಯೇ ಇದೆ. ತಂದೆ-ತಾಯಿಯ ಈ ಪ್ರಭಾವಳಿಯಿಂದ ಕಲ್ಯಾಣಿ ಪಾಲಿಗೆ ಚಿತ್ರರಂಗದ ಭಾಗಿಲು ಸುಲಭವಾಗಿ ತೆರೆದಿರಬಹುದು. ಆದರೆ. ಆ ನಂತರ ಕಲ್ಯಾಣಿ ಸಾಧನೆಯ ಕಂಬವನ್ನೇರಿದ್ದು ತನ್ನ ಪರಿಶ್ರಮದಿಂದಲೇ. ಇದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ.ಇಂಥಾ ಕಲ್ಯಾಣಿ ಪ್ರಿಯದರ್ಶನ್ ಸದ್ಯ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಮನೆಯ ಸೊಸೆಯಾಗಲಿದ್ದಾರೆ, ಮೋಹನ್ ಲಾಲ್ ಅವರ ಮಗ ಪ್ರಣವ್ ಜೊತೆ ಕಲ್ಯಾಣಿ ಶೀಘ್ರದಲ್ಲಿಯೇ ಸಪ್ತಪದಿಯನ್ನು ತುಳಿಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಕಲ್ಯಾಣಿಯ ಮದುವೆಯ ಸುತ್ತ ಮುತ್ತ ಕೇರಳಿಗರಲ್ಲಿ ಕುತೂಹಲ ಮನೆ ಮಾಡಿದೆ.ಇದಕ್ಕೆ ಪೂರಕವಾಗಿ ಕಲ್ಯಾಣಿ ಮತ್ತು ಪ್ರಣವ್ ಜೊತೆಯಲ್ಲಿಯೇ ಎರಡು ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ 2022ರಲ್ಲಿ ಬಂದ ”ಹೃದಯಂ” ಬ್ಲಾಕ್ಬಸ್ಟರ್ ಆದರೆ 2024ರಲ್ಲಿ ಬಂದ ”ವರ್ಷಂಗಲ್ಕು ಶೇಷಂ” ಚಿತ್ರ ಸೂಪರ್ ಹಿಟ್ ಸ್ಥಾನವನ್ನು ಅಲಂಕರಿಸಿದೆ. ಇನ್ನು ಪ್ರಣವ್ ಮತ್ತು ಕಲ್ಯಾಣಿ ಬಾಲ್ಯದ ಗೆಳೆಯರು. ಎಲ್ಲಕ್ಕಿಂತ ಮುಖ್ಯವಾಗಿ ಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ. 45 ಬಾರಿ ಮೋಹನ್ ಲಾಲ್ಗೆ ಆಕ್ಷನ್ ಕಟ್ ಹೇಳಿದ ಹೆಗ್ಗಳಿಕೆ ಪ್ರಿಯದರ್ಶನ್ ಅವರಿಗಿದೆ. ಈ ಎಲ್ಲ ಕಾರಣಗಳಿಂದ ಕಲ್ಯಾಣಿ ಮತ್ತು ಪ್ರಣವ್ ಮದುವೆಯಾಗಲಿದ್ದಾರೆ, ಹೊಸ ಬದುಕಿಗೆ ಶೀಘ್ರದಲ್ಲಿಯೇ ಮುನ್ನುಡಿ ಬರೆಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇಷ್ಟೇ ಅಲ್ಲ ಕಲ್ಯಾಣಿ ಅವರ ತಾಯಿ ಲಿಸ್ಸಿ, ವಿಷು ಹಬ್ಬದ ಪ್ರಯುಕ್ತ ಶುಭ ಕೋರಿದರೆ ಅಲ್ಲಿಯೂ ಬಂದು ಕಲ್ಯಾಣಿ ಮತ್ತು ಪ್ರಣವ್ ಮದುವೆ ಚರ್ಚೆಯನ್ನು ಸದ್ಯ ಕೇರಳ ಚಿತ್ರ ರಸಿಕರು ಮಾಡಿದ್ದಾರೆ.



