ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರೆನಿಸಿ ಕೊಂಡಿರುವ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೋನ್ ಗ್ರೀನ್, ಮೊಹಮ್ಮದ್, ಅಲ್ಜಾರಿ ಜೋಸೆಫ್ ಅವರಂತಹ ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹೊರೆ ಎನಿಸಿದ್ದಾರೆ.
ಇದೆಲ್ಲದರ ನಡುವೆ ಇದೀಗ, ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್, ಟೂರ್ನಿಯ ಅರ್ಧದಲ್ಲೇ ಅನಿರ್ದಿಷ್ಟಾವಧಿಗೆ ತಂಡದಿಂದ ಹೊರಗುಳಿಯುವ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ.ಆರ್ಸಿಬಿ ತಂಡವು ಸನ್ರೈಸರ್ಸ್ ಹೈದರಾಬಾದ್ ಎದುರು ಸೋಲು ಕಂಡ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸಿ, ಆರ್ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.
ಈ ಕುರಿತಂತೆ ಪ್ರೆಸ್ ಕಾನ್ಫರೆನ್ಸ್ನಲ್ಲಿ ಮಾತನಾಡಿರುವ ಮ್ಯಾಕ್ಸ್ವೆಲ್, ಸದ್ಯದ ಮಟ್ಟಿಗಂತೂ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಿದ್ದೇನೆ ಎಂದೆನಿಸುತ್ತಿಲ್ಲ. ಈ ಕಾರಣಕ್ಕಾಗಿ ನಾನು ಅನಿರ್ದಿಷ್ಟಾವಧಿಗೆ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಕಳೆದ ಪಂದ್ಯದಲ್ಲಿ ನಾವು ಸೋಲು ಅನುಭವಿಸಿದ ಬೆನ್ನಲ್ಲೇ, ನಾನು ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಹಾಗೂ ಕೋಚ್ ಬಳಿ ಹೋಗಿ, ನನ್ನ ಬದಲಿಗೆ ಬೇರೆಯವರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ ಎನಿಸುತ್ತಿದೆ. ಸದ್ಯದ ಮಟ್ಟಿಗೆ ನಾನು ವಿಶ್ರಾಂತಿ ಪಡೆಯುತ್ತೇನೆ. ನನ್ನ ಬದಲಿಗೆ ಬೇರೆಯವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಮ್ಯಾಕ್ಸಿ ಹೇಳಿದ್ದಾರೆ.