ಬೆಂಗಳೂರು: ಕೆ.ಪಿ.ಸಿ.ಸಿ. ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದಹನುಮೇಗೌಡ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ಪಕ್ಷಕ್ಕೆ ಬರಮಾಡಿಕೊಂಡು, ಸಿದ್ದರಾಮಯ್ಯ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತದೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಗೆಲ್ಲಲೇಬೇಕು ಎಂಬ ಛಲದಿಂದ ಎಲ್ಲರೂ ಕೆಲಸ ಮಾಡಬೇಕು. ಮುದ್ದುಹನುಮೇಗೌಡರನ್ನು ಪಕ್ಷಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಎಂದು ಸಿದ್ದರಾಮಯ್ಯ ಅವರು ನುಡಿದು ಮುದ್ದುಹನುಮೇಗೌಡರು ಮೂಲತಃ ಕಾಂಗ್ರೆಸ್ನವರು.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಕರ್ನಾಟಕ ಸೇರಿದ್ದರು. ಅವರ ತಪ್ಪಿನ ಅರಿವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ. ತಪ್ಪು ಮಾಡಿದ್ದೇನೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ. ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಮುಖ್ಯ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಕ್ಷಕ್ಕೆ ಯಾರೇ ಬಂದರೂ ಸೇರಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಮುದ್ದಹನುಮೇಗೌಡರನ್ನು ಸೇರಿಸಿಕೊಳ್ಳಲು ಒಪ್ಪಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯವರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಅಭ್ಯರ್ಥಿ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ ಗೆಲ್ಲಲು ಅವಕಾಶವಿದೆ. ಒಳ್ಳೆಯ ವಾತಾವರಣವಿದೆ. ಸರ್ಕಾರ ಕೂಡ ಜನಪರವಾದ ಕೆಲಸಗಳನ್ನು ಮಾಡಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಆದ್ದರಿಂದ ಇಡೀ ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ.ಇತ್ತೀಚೆಗೆ ವಿವಿಧೆಡೆ ಹಮ್ಮಿಕೊಂಡಿದ್ದ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಬಹಳ ಜನ ಸೇರಿದ್ದರು. ಜನ ಸುಮ್ಮನೆ ಸೇರುವುದಿಲ್ಲ. ಜನರಿಗೆ ನಾವು ಮಾಡಿರುವ ಕೆಲಸಗಳ ಬಗ್ಗೆ ಸಮಾಧಾನ ಇದೆ. ಆ ಸಮಾಧಾನ ಇರುವುದರಿಂದಲೇ ಎಲ್ಲೇ ಸಭೆಗಳನ್ನು ಆಯೋಜಿಸಿದರೂ ಜನ ಸೇರಿದ್ದಾರೆ. ಮಂಗಳೂರು, ಮಳವಳ್ಳಿಯಲ್ಲಿಯೂ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಂದು ಸಿದ್ದರಾಮಯ್ಯ ಅವರು ಹೇಳಿದರು.
ನಂತರ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಪಕ್ಷದ ದ್ವಜವನ್ನು ನೀಡಿ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಜಿ. ಪರಮೇಶ್ವರ್, ಕೆ ರಾಜಣ್ಣ, ಸಲೀಂ ಅಹ್ಮದ್ ಉಪಸ್ಥಿತರಿದ್ದರು.