ಆರಂಭಕಾರ ಪ್ರಭಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಬಳಗದ ಅಜೇಯ ಯಾತ್ರೆ ಮುಂದುವರಿದಿದೆ. ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ರದ್ದಿನಿಂದಾಗಿ ಒಟ್ಟು 9 ಅಂಕಗಳನ್ನು ಗಳಿಸಿರುವ ಪಂಜಾಬ್ ಇದೀಗ ಐಪಿಎಲ್ ಅಂಕಪಟ್ಟಿಯಲ್ಲಿ ಆರ್ ಸಿಬಿಯನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ. ಏತನ್ಮಧ್ಯೆ ಮುಂಬೈ ಇಂಡಿಯನ್ಸ್ ನ ಆರಂಭಕಾರ ಕ್ವಿಂಟನ್ ಡಿಕಾಕ್ ಅವರು ಹೊಡೆದ ಭರ್ಜರಿ ವ್ಯರ್ಥವಾಯಿತು.ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 16ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಇನ್ನೂ 21 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು.
ಆರಂಭಕಾರ ಪ್ರಿಯಾಂಶ್ ಆರ್ಯ(9 ಎಸೆತಗಳಲ್ಲಿ 15) ಉತ್ತಮ ಭರವಸೆ ಮೂಡಿಸಿ ಬೇಗನೇ ಔಟಾದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ಕೂಪರ್ ಕಾನಲಿ (12 ಎಸೆತದಲ್ಲಿ 17) ಅವರ ಕತೆಯೂ ಅದೇ ರೀತಿ ಆಯಿತು. ಈ ವೇಳೆ ಜೊತೆಯಾದ ಪ್ರಭಸಿಮ್ರಾನ್ ಸಿಂಗ್(39 ಎಸೆತದಲ್ಲಿ ಅಜೇಯ 80) ಮತ್ತು ಶ್ರೇಯಸ್ ಅಯ್ಯರ್ (35 ಎಸೆತದಲ್ಲಿ 68) ಅವರು ಮುಂಬೈ ಕೈಯಿಂದ ಪಂದ್ಯವನ್ನು ಕಿತ್ತುಕೊಂಡರು.ಅದಕ್ಕೂ ಮೊದಲು ವೇಗಿ ಅರ್ಶದೀಪ್ ಸಿಂಗ್ ಅವರ ನಿಖರ ದಾಳಿಗೆ ಮುಂಬೈ ಇಂಡಿಯನ್ಸ್ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ತತ್ತರಿಸಿಹೋದರು. ಆದರೆ ಕ್ವಿಂಟನ್ ಡಿಕಾಕ್ ಅವರು ಛಲದಂಕಮಲ್ಲನAತೆ ಪಂಜಾಬ್ ವಿರುದ್ಧ ಆಡಿದರು. 60 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದ 112 ರನ್ ಗಳನ್ನು ಬಾರಿಸಿದರು. ಅವರಿಗೆ ನಮನ್ ಧಿರ್(31 ಎಸೆತದಲ್ಲಿ 50) ಅವರು ಉತ್ತಮ ಸಾಥ್ ನೀಡಿದರು. ಹಾರ್ದಿಕ್ ಪಾಂಡ್ಯ ಅವರು ಲಾಂಗ್ ಆನ್ ಗೆ ಹೊಡೆದ ಚೆಂಡನ್ನು ಶ್ರೇಯಸ್ ಅಯ್ಯರ್ ಅವರು ಅದ್ಭುತವಾಗಿ ಕ್ಯಾಚ್ ಹಿಡಿದು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. 22 ರನ್ ಗೆ 3 ವಿಕೆಟ್ ಕಬಳಿಸಿದ ಅರ್ಶದೀಪ್ ಸಿಂಗ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮುಂಬೈಗೆ ಮುಳುವಾದ ಶ್ರೇಯಸ್ ಅಯ್ಯರ್- ಪ್ರಭಸಿಮ್ರಾನ್ ಜೊತೆಯಾಟ



