ಕೋಲಾರ: ನಿರೀಕ್ಷೆಯಂತೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಅಧ್ಯಕ್ಷರಾಗಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಎಸ್. ಮೋಹನ್‌ರೆಡ್ಡಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕ್‌ನ ಒಟ್ಟು 18 ನಿರ್ದೇಶಕ ಸ್ಥಾನಗಳ ಪೈಕಿ ಇಬ್ಬರ ಫಲಿತಾಂಶ ನ್ಯಾಯಾಲಯದಲ್ಲಿ ಇರುವುದರಿಂದ 16 ನಿರ್ದೇಶಕರು, ಇಬ್ಬರು ನಾಮನಿರ್ದೇಶಿತ ಸದಸ್ಯರು ಹಾಗೂ ಅಪೆಕ್ಸ್ ಬ್ಯಾಂಕ್‌ನ ಒಬ್ಬ ಪ್ರತಿನಿಧಿ ಸೇರಿ ಒಟ್ಟು 19 ಸದಸ್ಯರು ಚುನಾವಣೆ ಪ್ರಕ್ರಿಯೆಲ್ಲಿ ಪಾಲ್ಗಂಡಿದ್ದರು. ಸೋಮವಾರ ಸೆಪ್ಟೆಂಬರ್ 7ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಮಾಡಲಾಗಿತ್ತು.ಚುನಾವಣೆಯ ನಿಗದಿತ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಸ್. ಮೋಹನ್‌ರೆಡ್ಡಿ ಮಾತ್ರ ನಾಮಪತ್ರ ಸಲ್ಲಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಘೋಷಿಸಿದರು.ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ಆಯ್ಕೆಯಾದ 13 ನಿರ್ದೇಶಕರು, ಒಬ್ಬ ನಾಮನಿರ್ದೇಶಿತ ಸದಸ್ಯ ಹಾಗೂ ಅಪೆಕ್ಸ್ ಬ್ಯಾಂಕ್‌ನ ಒಬ್ಬ ಪ್ರತಿನಿಧಿ ಸೇರಿದಂತೆ 15 ಸದಸ್ಯರು ಹಾಜರಿದ್ದರು. ಅವಿರೋಧ ಆಯ್ಕೆಯಾದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ
ಅಧ್ಯಕ್ಷ ಹಾಗೂ ಶಾಸಕ ಕೊತ್ತೂರು ಮಂಜುನಾಥ್, ನ್ಯಾಯ ಮತ್ತು ಧರ್ಮದ ಮಾರ್ಗದಲ್ಲಿ ರೈತರು ಹಾಗೂ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಡಿಸಿಸಿ ಬ್ಯಾಂಕ್ ಅನ್ನು ಮತ್ತಷ್ಟು ಬಲಪಡಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದರು.ಕಳೆದ 2023ರಿಂದ ಆಡಳಿತ ಮಂಡಳಿ ಇಲ್ಲದೆ ಇದ್ದ ಬ್ಯಾಂಕ್‌ಗೆ ಇದೀಗ ಹೊಸ ಆಡಳಿತ ಮಂಡಳಿ ಆಯ್ಕೆಯಾಗಿದೆ. ಚುನಾವಣೆ ನಡೆದು 15 ತಿಂಗಳು ಕಳೆದಿದ್ದರೂ ವಿವಿಧ ಕಾರಣಗಳಿಂದ ಅಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಮುಖ್ಯಮಂತ್ರಿ ಅವರ ಸಹಕಾರದಿಂದ ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಅವಕಾಶ ದೊರೆತಿದೆ ಎಂದು ಹೇಳಿದರು.
ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿ ಕುರಿತು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಒಂದು ತಿಂಗಳೊಳಗೆ ಬ್ಯಾಂಕ್‌ನ ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕ್ ದಿವಾಳಿಯಾಗಿದೆ ಎಂದು ಯಾರು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಬ್ಯಾಂಕ್‌ನ ವಾಸ್ತವ ಸ್ಥಿತಿಗತಿ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದರು.
ಕೆಸಿಸಿ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಬ್ಯಾಂಕ್‌ಗೆ ಸಾಧ್ಯವಾದಷ್ಟು ಠೇವಣಿ ಸಂಗ್ರಹಿಸಿ ಆರ್ಥಿಕವಾಗಿ ಸಬಲಗೊಳಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಶಾಸಕನಾಗಿರುವ ಕಾರಣದಿಂದ ತಮಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅಧ್ಯಕ್ಷ ಸ್ಥಾನ ಸೇರಿದಂತೆ ತಮ್ಮ ಮೇಲಿರುವ ಮೂರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಅವಿರೋಧ ಆಯ್ಕೆಗೆ ಸಹಕರಿಸಿದ ಶಾಸಕರಾದ ಪುಟ್ಟಸ್ವಾಮಿಗೌಡ, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಸುಬ್ಬಾರೆಡ್ಡಿ, ಎಂಎಲ್‌ಸಿ ಅನಿಲ್ ಕುಮಾರ್ ಸೇರಿದಂತೆ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ರೈತರು ಮತ್ತು ಮಹಿಳೆಯರಿಗೆ ಅಗತ್ಯ ಸಾಲ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ. ಬ್ಯಾಂಕ್‌ನ ಪ್ರಸ್ತುತ ಆರ್ಥಿಕ ಸ್ಥಿತಿಗತಿ ಕುರಿತು ಯಾರ ಬಳಿಯೂ ಸ್ಪಷ್ಟು ಮಾಹಿತಿ ಇಲ್ಲ. ಹೀಗಾಗಿ ಈ ಹಂತದಲ್ಲಿ ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ ಯಾಗಿರುವುದು ಕಂಡುಬAದರೆ ಅಗತ್ಯ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಬ್ಯಾಂಕ್‌ನ್ನು ಮತ್ತೆ ಸಬಲಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಹಿಂದೆ ಬ್ಯಾಂಕ್ ಸಂಕಷ್ಟದಲ್ಲಿದ್ದಾಗಲೂ ಠೇವಣಿ ಇಡಲಾಗಿತ್ತು. ಮುಖ್ಯಮಂತ್ರಿ ಅನುಮತಿ ನೀಡಿದರೆ ತಮ್ಮ ನಿಗಮದಿಂದ 300 ಕೋಟಿ ಠೇವಣಿ ಇಡಲು
ಸಿದ್ಧವಿರುವುದಾಗಿ ತಿಳಿಸಿದರು.ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ. ನಂಜೇಗೌಡ ಹಾಗೂ ಸುಬ್ಬಾರೆಡ್ಡಿ ಆರ್ಥಿಕವಾಗಿ ಸಬಲರಾಗಿದ್ದು, ಅವರಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದರು.ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್‌ನ ಆರ್ಥಿಕ ಸಮಸ್ಯೆಗಳನ್ನು ಸರಿಪಡಿಸಲು ಆಡಳಿತ ಮಂಡಳಿ ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ನ ಹಿಂದಿನ ವೈಭವ ಮರಳಿ ಬರಬೇಕು. ಆ ಮೂಲಕ ರೈತರು ಮತ್ತು ಮಹಿಳೆಯರಿಗೆ ಅಗತ್ಯ ಸಾಲ ಸೌಲಭ್ಯ ದೊರೆಯುವಂತಾಗಬೇಕು ಎಂದು ಹೇಳಿದರು. ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇದೀಗ ನಡೆದಿರುವುದು ಸಂತಸದ ವಿಚಾರ. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಬ್ಯಾಂಕ್‌ನ ಲೋಪದೋಷÀಗಳನ್ನು ಸರಿಪಡಿಸಿ ರೈತರು ಮತ್ತು ಮಹಿಳೆಯರಿಗೆ ಅಗತ್ಯ ಸಾಲ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ನೂತನ ಆಡಳಿತ ಮಂಡಳಿ ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು. ಎಂಎಲ್‌ಸಿ ಎಂ.ಎಲ್. ಅನಿಲ್ ಕುಮಾರ್, ನೂತನ ಉಪಾಧ್ಯಕ್ಷ ಎಚ್.ಎಸ್. ಮೋಹನ್‌ರೆಡ್ಡಿ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕರು, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಉಪಸ್ಥಿತರಿದ್ದರು.