ಕೋಲಾರ: ಮಳೆ ಕೊರತೆಯಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ನಿಯಮಾವಳಿಗಳಿಗಿಂತ ಜನರ ದಾಹ ತೀರಿಸುವುದು ಮುಖ್ಯವಾಗಿದ್ದು, ಈ ಕುರಿತು ತಕ್ಷಣವೇ ಕ್ರಿಯಾ ಯೋಜನೆ ರೂಪಿಸಿ ನೀರು ಪೂರೈಸಲು ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು, ಕೃಷಿ, ಎತ್ತಿನಹೊಳೆ ಯೋಜನೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು ಹಾಗೂ ಜನಪ್ರತಿನಿಧಿಗಳ ದೂರುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.ಜಿಲ್ಲೆಯ 154 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 1,523 ಗ್ರಾಮಗಳು ಹಾಗೂ 1,953 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು. ನಿಯಮದ ಪ್ರಕಾರ ಪ್ರತಿಯೊಬ್ಬರಿಗೆ ಕನಿಷ್ಠ 55 ಎಲ್.ಪಿ.ಸಿ.ಡಿ ನೀರು ಒದಗಿಸುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ಶೇ. 47 ರಷ್ಟು ಮಳೆ ಕೊರತೆಯಾಗಿರುವುದರಿಂದ 130 ಹಳ್ಳಿಗಳಲ್ಲಿ ತೀವ್ರ ಸಮಸ್ಯೆಯಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರದಿಂದ ಟಾಸ್ಕ್ ಫೋರ್ಸ್ಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತುರ್ತು ಅಗತ್ಯವಿರುವ ಕಡೆ ಟ್ಯಾಂಕರ್‌ಗಳು ಹಾಗೂ ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಲು ಸಚಿವರು ಸೂಚಿಸಿದರು.ಹಳೆಯ ಕಾಮಗಾರಿಗಳ ಬಿಲ್ ಪಾವತಿ ವಿಳಂಬದ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು. ಕೊಳವೆಬಾವಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸುಮಾರು 30 ರಿಂದ 40 ಕೋಟಿ ರೂ. ಬಿಲ್ ಬಾಕಿ ಇರುವುದರಿಂದ ಹೊಸ ಬೋರ್‌ವೆಲ್ ಕೊರೆಯಲು ಅವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಸಮನ್ವಯ ಸಾಧಿಸಿ ಬಾಕಿ ಪಾವತಿಸಲು ಸೂಚಿಸಲಾಯಿತು. ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 1,813 ಹಳ್ಳಿಗಳ ಪೈಕಿ 623 ಹಳ್ಳಿಗಳಲ್ಲಿ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದ್ದು, ಹೊಸ ಕೊಳವೆಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಿ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ತಾಕೀತು ಮಾಡಲಾಯಿತು. ಇದೇ ವೇಳೆ, ಆರ್.ಓ ಪ್ಲಾಂಟ್ ನಿರ್ವಹಣೆಗೆ ತಿಂಗಳಿಗೆ ಅಂದಾಜು 35 ಲಕ್ಷ ರೂ. ಹೊರೆಯಾಗುತ್ತಿದ್ದು, ಕೇವಲ ನಿರ್ಮಾಣ ಮಾಡುವುದಲ್ಲದೆ ನಿರ್ವಹಣೆ ಜವಾಬ್ದಾರಿಯನ್ನು ಸಂಬAಧಪಟ್ಟ ಇಲಾಖೆಗಳೇ ಹೊರಬೇಕು ಎಂದು ಸಭೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು.ಬೃಹತ್ ಕುಡಿಯುವ ನೀರಿನ ಯೋಜನೆಗಳ ಕುರಿತು ಮಾತನಾಡಿದ ಜನಪ್ರತಿನಿಧಿಗಳು, 45 ಕೋಟಿ ರೂ. ವೆಚ್ಚದ ಮಾರ್ಕಂಡೇಯ ಜಲಾಶಯ ಯೋಜನೆಯಡಿ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ 186 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಿದ್ದರೂ, ಪಂಪ್ ಹಾಗೂ ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿರುವ ಕಾರಣ ಕೇವಲ 26 ಹಳ್ಳಿಗಳಿಗೆ ಮಾತ್ರ ನೀರು ತಲುಪುತ್ತಿದ್ದು, ತ್ವರಿತವಾಗಿ ಸರಿಪಡಿಸುವಂತೆ ಆಗ್ರಹಿಸಿದರು. ಒಟ್ಟು 500 ಎಂ.ಸಿ.ಎಫ್.ಟಿ ಸಾಮರ್ಥ್ಯದ ಯರಗೋಳು ಜಲಾಶಯದಲ್ಲಿ ಸದ್ಯ 140 ಎಂ.ಸಿ.ಎಫ್.ಟಿ ನೀರಿದ್ದು, ಮುಂದಿನ 5 ತಿಂಗಳಿಗೆ ಮಾತ್ರ ಸಾಕಾಗಲಿದೆ. ಇದರಿಂದ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ತಾಲೂಕುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಯರಗೋಳು ಹಾಗೂ ಮಾರ್ಕಂಡೇಯ ಡ್ಯಾಂನಿAದ ನೀರು ಬಾರದ ಕಾರಣ ಪಟ್ಟಣದಲ್ಲಿ 15 ಬಾಡಿಗೆ ವಾಟರ್ ಟ್ಯಾಂಕರ್‌ಗಳ ಮೂಲಕ ಜನರಿಗೆ ನೀರು ಪೂರೈಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯ ಗಮನ ಸೆಳೆದರು.ಎತ್ತಿನಹೊಳೆ ಯೋಜನೆಯ ಪ್ರಗತಿ ಕುರಿತು ಸಚಿವರು ಮಾಹಿತಿ ನೀಡಿ, 5.8 ಕಿ.ಮೀ. ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 29 ಕೋಟಿ ರೂ. ಇರಿಸಲಾಗಿದ್ದು, ಗುಬ್ಬಿ ಬಳಿಯ 1.8 ಎಕರೆ ಅರಣ್ಯ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡು ಮರ ಕಡಿಯುವ ಕಾರ್ಯ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಭೈರಗೊಂಡ್ಲುವರೆಗೂ ನೀರು ಹರಿಯಲಿದೆ ಎಂದು ಭರವಸೆ ನೀಡಿದರು. ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ವಾಡಿಕೆಯಂತೆ ಜುಲೈನಲ್ಲಿ ಶೇ. 90ರಷ್ಟು ಬಿತ್ತನೆಯಾಗಬೇಕಿತ್ತು, ಆದರೆ ಮಳೆ ಕೊರತೆಯಿಂದ ಮುಖ್ಯ ಬೆಳೆಯಾದ ರಾಗಿ ಕೇವಲ ಶೇ. 14ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದರು. ಆಗಸ್ಟ್ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿದ್ದು, ರೈತರಿಗೆ ಅಗತ್ಯವಿರುವ ರಾಗಿ ಬಿತ್ತನೆ ಬೀಜ, ಡಿಎಪಿ, ಕಾಂಪ್ಲೆಕ್ಸ್ ಮತ್ತು ಯೂರಿಯಾ ರಸಗೊಬ್ಬರದ ಕೊರತೆಯಿಲ್ಲ ಹಾಗೂ ದಾಸ್ತಾನು ಲಭ್ಯವಿದೆ ಎಂದು ಸ್ಪಷ್ಟಪಡಿಸಿದರು.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ, ಅತಿಥಿ ಶಿಕ್ಷಕರ ನೇಮಕಾತಿಯನ್ನು ತ್ರಿಸದಸ್ಯ ಸಮಿತಿಯ ಮೂಲಕ ಮೆರಿಟ್ ಆಧಾರದ ಮೇಲೆ ಪಾರದರ್ಶಕವಾಗಿ ಮಾಡಲಾಗಿದೆ ಹಾಗೂ ಶೇ. 100ರಷ್ಟು ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮತ್ತು ಗಾಂಜಾ ಮಾರಾಟವಾಗುತ್ತಿದ್ದು, ಯುವಕರು, ವಿದ್ಯಾರ್ಥಿಗಳು ದಾರಿತಪ್ಪುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕೇವಲ ದಂಡ ವಿಧಿಸಿ ಕೈಬಿಡದೆ, ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿನ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳ ಕೊರತೆಯ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು. ರಸ್ತೆ ಹಾಗೂ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳ ವೇಳೆ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಬಂದAತೆ ಮರ ಕಡಿಯುವುದನ್ನು ನಿಲ್ಲಿಸಿ, ಕೇವಲ ಅಗತ್ಯವಿರುವ ಮರಗಳನ್ನು ಮಾತ್ರ ತೆರವುಗೊಳಿಸಲು ಸೂಚಿಸಲಾಯಿತು.ಕುಡಿಯುವ ನೀರು ಪೂರೈಕೆಗೆ ಮುಂದಿನ ಸೋಮವಾರ ದಿನಾಂಕ ನಿಗದಿಪಡಿಸಿ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯಲ್ಲಿ ಭಿತ್ತನೆ ಬೀಜ, ಮೇವು. ರಸಗೊಬ್ಬರ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಗಮನ ಹರಿಸಬೇಕು. ವಿಳಂಬವಾಗಿರುವ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.ಸಭೆಯ ಮುಕ್ತಾಯದ ಕ್ಷಣದಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣವು ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೂ ಜಮೆಯಾಗುತ್ತಿರುವ ಗಂಭೀರ ಲೋಪವು ಚರ್ಚೆಗೆ ಬಂತು. ಮೃತಪಟ್ಟವರ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಹಾಗೂ ಭವಿ?À್ಯದಲ್ಲಿ ಈ ರೀತಿ ಆಗದಂತೆ ತಡೆಯಲು ಸರ್ಕಾರದ ಹಣ ಪೋಲಾಗದಂತೆ ಎಚ್ಚರವಹಿಸಿ ತಕ್ಷಣವೇ ಲೀಡ್ ಬ್ಯಾಂಕ್ ಅಧಿಕಾರಿಗಳ ವಿಶೇ?À ಸಭೆ ಕರೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರುಜ್ ಖಾನ್, ಜಿಲ್ಲಾಧ್ಯಕ್ಷ ಶಿವಕುಮಾರ್, ಶಾಸಕರಾದ ಕೊತ್ತೂರು ಜಿ. ಮಂಜುನಾಥ್, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಡಾ. ರೂಪಕಲಾ ಶಶಿಧರ್, ಸಮೃದ್ಧಿ ಮಂಜುನಾಥ್, ವಿಧಾನ ಪರಿ?Àತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಹನೀಫ್, ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಜಿ.ಪಂ. ಸಿಇಒ ಡಾ. ಪ್ರವೀಣ್ ಪಿ. ಬಾಗೇವಾಡಿ, ಎಸ್ಪಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ರಕ್ಷಣಾಧಿಕಾರಿ ಶಿವಾಂಷ ರಜಪೂತ, ಡಿಸಿಫ್ ಸರೀನಾ ಸಿಕ್ಕಲಿಗಾರ್, ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಸೀಲ್ದಾರ್‌ಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.