ಚಳ್ಳಕೆರೆ: ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಪ್ರತಿಯೊಬ್ಬರೂ ಜ್ಞಾನವಂತರಾಗಿ ಹಾಗೂ ಶಕ್ತಿಶಾಲಿಗಳಾಗಿ ರೂಪು ಗೊಳ್ಳಲು ಶಿಕ್ಷಣವೊಂದೇ ಪ್ರಬಲ ಅಸ್ತçವಾಗಿದೆ. ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ ಮುನ್ನೆಲೆಗೆ ಬಂದಾಗ ಮಾತ್ರ ಸಮಾಜದ ನೈಜ ಅಭಿವೃದ್ಧಿ ಸಾಧ್ಯ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.ನಗರದ ಯಾದವ ಭವನದಲ್ಲಿ ತಾಲೂಕು ಗೊಲ್ಲ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ. ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಕುರಿತುಪೋಷಕರುನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಇದನ್ನು ಅರಿತು ಮೌಲ್ಯಯುತ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.ಎಲ್ಲ ಸಮಾಜದ ಬಂಧುಗಳ ಆಶೀರ್ವಾದದಿಂದ ತಮಗೆ ಈ ಸ್ಥಾನ ಲಭಿಸಿದ್ದು, ಯಾದವ ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಸರ್ಕಾರಿ ಸೌಲಭ್ಯಗಳು ಹಾಗೂ ನ್ಯಾಯ ಯುತ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಜಿಲ್ಲೆಯ ಜನರ ಐದು ದಶಕಗಳ ಹೋರಾಟದ ಕನಸಾಗಿರುವ ಭದ್ರಾ ಯೋಜನೆಯ ಕುರಿತು ಮಾತನಾಡಿದ ಸಚಿವರು, ಶಾಶ್ವತ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಭದ್ರಾ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗಿದೆ. 2021ರಿಂದಲೇ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದ್ದು, ಅಲ್ಲಿಂದ ರಾಣಿ ಕೆರೆ ಹಾಗೂ ವೇದಾವತಿ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆಗಾಲದ ವೇಳೆಗೆ ಗೋನೂರು ಅಕ್ವೆಡಕ್ಟ್ ಕಾಮಗಾರಿ ಪೂರ್ಣಗೆಳಿಸಿ, ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ಹಾಗೂ ಜಗಳೂರು ತಾಲೂಕಿನ ಕೆರೆಗಳಿಗೆ ತ್ವರಿತವಾಗಿ ನೀರಾವರಿ ಸೌಲಭ್ಯ ವಿಸ್ತ ರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಬರಗಾಲದ ಸಂಕಷ್ಟದಲ್ಲೂ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ವಿರೋಧ ಪಕ್ಷಗಳ ಟೀಕೆಗಳಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡುತ್ತೇವೆ. ರೈತರಿಗಾಗಿ ನೇಗಿಲ ಯೋಗಿ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು ಹೋಬಳಿ ಮಟ್ಟಕ್ಕೆ ತೆರಳಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಪ್ರಜಾಸೇವಾ ಕಾರ್ಯ ಕ್ರಮದ ಮೂಲಕ ಜನಪರ ಆಡಳಿತ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಇದೇ ಸಂದರ್ಭದಲ್ಲ ಗೊಲ್ಲ ಸಮುದಾಯದ ಮುಖಂಡರು ಸಚಿವರ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು
ಮಂಡಿಸಿ ಶೀಘ್ರ ಈಡೇರಿಕೆಗೆ ಆಗ್ರಹಿಸಿದರು. ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಜಾತಿ ಪಟ್ಟಿಗೆ ಕಾಡುಗೊಲ್ಲ ಮತ್ತು ಗೊಲ್ಲ ಸಮುದಾಯಗಳನ್ನು ‘ಬಿಸಿಎಂ’ ಪಟ್ಟಿಗೆ ಸೇರಿಸಬೇಕು, ಚಳ್ಳಕೆರೆ ತಾಲೂಕಿನ 135 ಗೊಲ್ಲರ ಹಟ್ಟಿಗಳಲ್ಲಿನ 48 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಲೆಮಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಬೇಕು. ಹಾಗೂ ಯಾದವ ಸಮಾಜಕ್ಕೆ ಮೀಸಲಿಟ್ಟಿರುವ 2 ಎಕರೆ ಜಾಗದಲ್ಲಿ ವಿದ್ಯಾರ್ಥಿ ಭವನ ನಿರ್ಮಾಣಕ್ಕೆ ಈಗಾಗಲೇ ಮಂಜೂರಾಗಿರುವ 2 ಕೋಟಿ ಅನುದಾನದಡಿ ಶೀಘ್ರ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಎತ್ತಪ್ಪ ದೇವಸ್ಥಾನ ಸೇರಿದಂತೆ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಪ್ರಮುಖ ಆರಾಧನಾ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಮತ್ತು ನಾಡೋಜ ಸಿರಿಯಜ್ಜಿ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ 1 ಕೋಟಿ ಮೀಸಲಿಡುವ ಜೊತೆಗೆ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ್ ಯಾದವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಮುಖಂಡರಾದ ಬಿ.ಕೆ.ತಿಪ್ಪೇಸ್ವಾಮಿ, ಮಹೇಶ್ವರಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್, ಶಾಂತಕುಮಾರಿ, ವೆಂಕಟಲಕ್ಷ್ಮೀ, ಚಾರುಮತಿ, ಚಿತ್ರಾವತಿ, ಎಸ್.ಟಿ.ರಮೇಶ್, ಕಾಡುಗೊಲ್ಲರ ಸಂಘದ ಯುವ ಘಟಕದ ಅಧ್ಯಕ್ಷ ವೀರೇಶ್, ಗೋವಿಂದಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಸೇರಿದಂತೆ ಯಾದವ ಸಮಾಜದ ಮುಖಂಡರು, ತಾಲೂಕು ಗೊಲ್ಲ ನೌಕರರ ಸಂಘದ ಪದಾಧಿಕಾರಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.