ರಾಮನಗರ: ನಗರದ ಭವಿಷ್ಯದ ಹಿತದೃಷ್ಟಿ ಯಿಂದ ಸುಸಜ್ಜಿತ ಟೌನ್ ಮಾಸ್ಟರ್ ಪ್ಲಾನ್‌ಗೆ ಸರ್ಕಾರದಿಂದ ಶೀಘ್ರದಲ್ಲೇ ಅನುಮೋದನೆ ಪಡೆಯಲಾಗುವುದು ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್. ಸಿದ್ದಲಿಂಗೇಗೌಡ (ಪ್ರಾಣೇಶ್) ತಿಳಿಸಿದರು.ಸೋಮವಾರ ನಗರಾಭಿವೃದ್ಧಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಪ್ರಸ್ತುತ ಹಿಂದಿನ ಟೌನ್ ಮಾಸ್ಟರ್ ಪ್ಲಾನ್ ಚಾಲ್ತಿಯಲ್ಲಿದೆ. ಕೈಗಾರಿಕೆ, ವಸತಿ, ವಾಣಿಜ್ಯ, ಕೃಷಿ ಝೋನ್‌ಗಳನ್ನು ಹೊಸದಾಗಿ ಮಾಡಬೇಕಿದೆ. ಈಗಾಗಲೇ ಪ್ರಸ್ತಾವನೆ ಸರ್ಕಾರದ ಮುಂದಿದೆ. ಶೀಘ್ರದಲ್ಲೆ ಸುಸಜ್ಜಿತವಾಗಿ ಟೌನ್ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.ನನಗೆ ಈ ಅವಕಾಶ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್, ಶಾಸಕರಾದ ಇಕ್ಬಾಕ್ ಹುಸೇನ್ ಹಾಗೂ ಪಕ್ಷದ ಮುಖಂಡರು, ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿರುವ ಕಾರಣ ಅಗತ್ಯ ಸಹಕಾರ ಪಡೆದು ಜಿಲ್ಲಾ ಕೇಂದ್ರ ರಾಮನಗರ ನಗರಾಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.
ಹಿಂದಿನ ಅದ್ಯಕ್ಷ ಎ.ಬಿ.ಚೇತನ್ ಕುಮಾರ್ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದರ ಜತೆಗೆ, ಸರ್ಕಾರದ ಮಟ್ಟದಲ್ಲಿ ಬಗೆಹರಿಸಬೇಕಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಬಡಾವಣೆಗಳ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, 116 ಎಕರೆಯಲ್ಲಿ ನೂತನ ಬಡಾವಣೆ ನಿರ್ಮಿಸಲಾಗುತ್ತಿದೆ. ಇಲ್ಲ ಕಡಿಮೆ ಬೆಲೆಯಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಸುಸಜ್ಜಿತ ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.ಅನಧಿಕೃತ ಬಡಾವಣೆಗಳಿಗೆ ಅವಕಾಶ ನೀಡುವುದಿಲ್ಲ. ಜನರು ಕಚೇರಿಗಳಿಗೆ ಅಲೆದಾಡದೆ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರುಡಾವನ್ನು ಜನಸ್ನೇಹಿ ಸಂಸ್ಥೆಯನ್ನಾಗಿ ರೂಪಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗಾಗಿ ಡಿ.ಕೆ. ಸುರೇಶ್ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನ ಹಾಗೂ ವಿಶ್ವಾಸದಿಂದ ನನಗೆ ಈ ಸ್ಥಾನ ದೊರೆತಿದ್ದು, ಅವರ ನಂಬಿಕೆಗೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸುವೆ. ನಗರದ ಅಭಿವೃದ್ಧಿಗೆ ಸುತ್ತಮುತ್ತಲಿನ ಮೂರ್ನಾಲ್ಕು ಗ್ರಾಮಗಳನ್ನು ನಗರ ವ್ಯಾಪ್ತಿಗೆ ಸೇರಿಸಿ ವಿಸ್ತರಣೆ ಮಾಡುವ ಅಗತ್ಯವಿದೆ. ಇದರಿಂದ ಯೋಜಿತ ರೀತಿಯಲ್ಲಿ ನಗರಾಭಿವೃದ್ಧಿ ಸಾಧ್ಯವಾಗಲಿದೆ ಎಂದರು.1987ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದೇನೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಬೇಕು ಎಂಬ ಆಶಯದಿಂದ 2023ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದೆ. ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರ ಗೆಲುವಿಗೂ ಶ್ರಮಿಸಿದ್ದೆ. ಮುಂದಿನ ಚುನಾವಣೆಯಲ್ಲಿಯೂ ಡಿ.ಕೆ. ಶಿವಕುಮಾರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು ಎಂಬ ಆಶಯ ನನ್ನದು ಎಂದು ನೂತನ ಅಧ್ಯಕ್ಷ ಪ್ರಾಣೇಶ್ ಹೇಳಿದರು.ರಾಮನಗರ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕೆ.ಎಸ್.ಸಿದ್ದಲಿಂಗೇಗೌಡ (ಪ್ರಾಣೇಶ್) ಅವರು ಪ್ರಾಧಿಕಾರದ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಶಶಿ, ಜಿಬಿಡಿಎ ಅಧ್ಯಕ್ಷ ಎಲ್.ಚಂದ್ರಶೇಖರ್, ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜು, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ರೇವಣ್ಣ, ಮಾಯಾಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಮುಖಂಡರುಗಳಾದ ಶ್ರೀನಿವಾಸ ಮೂರ್ತಿ, ಚಿಕ್ಕ ಸ್ವಾಮಿ, ದೇವರದೊಡ್ಡಿ ಚಂದ್ರಗಿರಿ, ಬಿ.ವಿ.ರಾಜೇಂದ್ರ, ಚನ್ನಮಾನಹಳ್ಳಿ ರಾಜು, ರಾಮಚಂದ್ರ, ರೇವಣ್ಣ, ರಂಗಸ್ವಾಮಿ, ಶ್ರೀನಿವಾಸ ಮೂರ್ತಿ, ರವಿ, ಬಾಬು, ಪಾರ್ವತಮ್ಮ, ರಮೇಶ್, ಶ್ರೀನಿವಾಸ್, ದಾಸೇಗೌಡ, ಎ ಟಿ ಎಂ ಸುನಿಲ್, ವೆಂಕಟಪ್ಪ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು.