LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಮೋದಿ ಜನ್ಮದಿನ: ಮಹಿಳಾ ಪೌರ ಕಾರ್ಮಿಕರಿಗೆ ಪಾದ ಪೂಜೆ


ರಾಮನಗರ: ಕಳೆದ 25 ವರ್ಷಗಳಿಂದ ನಿರಂತರ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಮಹಿಳಾ ಪೌರಕಾರ್ಮಿಕರ ಪಾದ ತೊಳೆದು ಪೂಜಿಸುವ ಮೂಲಕ ವಿಶಿಷ್ಠವಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇವಾ ಸಂಕಲ್ಪ ಅಭಿಯಾನವನ್ನು ಆರಂಭಿಸಿದರು.ನಗರದ ವಾಟರ್ ಟ್ಯಾಂಕ್ ಸರ್ಕಲ್ ಬಳಿಯಿರುವ ಪೌರ ಕಾರ್ಮಿಕರ ಕಚೇರಿ ಆವರಣದಲ್ಲಿ ಶುಕ್ರವಾರ ಮಹಿಳಾ ಪೌರ ಕಾರ್ಮಿಕರ ಪಾದಪೂಜೆ ಮಾಡಿ ಬಾಗಿನ ನೀಡಿ ಅವರು ಮಾತನಾಡಿದರು. ಜನರ ಆರೋಗ್ಯ ರಕ್ಷಿಸುವಲ್ಲಿ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು. ತಮ್ಮ ಕಾಯಕ ನಿಷ್ಠೆಯಿಂದ ಸ್ವಚ್ಛ ಪರಿಸರ ನಿರ್ಮಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ವಿಶ್ವ ನಾಯಕ ಮೋದಿ ಅವರ ಜನ್ಮದಿನವನ್ನು ನಗರದ ಸ್ವಚ್ಛತೆಗೆ ನಿರಂತರ-ಶ್ರಮಿಸುವ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಎಂ.ಗೌತಮ್‌ಗೌಡ ತಿಳಿಸಿದರು.ವಿಶ್ವನಾಯಕ, ವಿಶ್ವಗುರು, ಭಾರತವನ್ನು ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿರುವ ನಾಯಕ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಮೋದಿ ಅವರದ್ದು ದೇಶ ಸೇವೆಯ ಸಾರ್ಥಕ ಪಯಣ. ಸತತ 13 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ, 12 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ ಎಂದರು.ವಿಶ್ವವೇ ಭಾರತವನ್ನು ತಿರುಗಿ ನೋಡುವಂತಹ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅವರ ನಾಯಕತ್ವದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿರುವುದೇ ನಮ್ಮ ಸೌಭಾಗ್ಯ. ಮೋದಿ ಅವರು ಮಾಡಿರುವ ಸೇವೆಯಲ್ಲಿ ನಮ್ಮದು ಅಳಿಲು ಸೇವೆಯಾಗಿದ್ದು, ದೇಶದಾದ್ಯಂತ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲೂ ಸಹ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ನೇತೃತ್ವದಲ್ಲಿ ಸೆ.17ರಿಂದ ಅ.17ರವರೆಗೆ ನಿರಂತರವಾಗಿ ಅಭಿನಂದನಾ, ಆಶೀರ್ವಾದ, ಸೇವೆಯ ಸಂಕಲ್ಪದ ಮೂಲಕ ಅನೇಕ ರೀತಿಯ ಸಮಾಜಮುಖಿ ಕಾರ್ಯಗಳು ನಡೆಯಲಿವೆ ಎಂದರು.ಆರೋಗ್ಯ ಶಿಬಿರ, ಪರಿಕರ ವಿತರಣೆ : ಜಿಲ್ಲೆಯಾದ್ಯಂತ ನಾವು ನಮ್ಮ ಕಾರ್ಯಕರ್ತರು, ಮುಖಂಡರ ಜೊತೆಗೂಡಿ ವಿವಿಧ ರೀತಿಯ ಸಮಾಜಮುಖಿ ಕೆಲಸ ಮಾಡಲಿದ್ದೇವೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳದ್ದೇವೆ. ರಾಮನಗರ, ಹಾರೋಹಳ್ಳಿ ತಾಲ್ಲೂಕಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಆರೋಗ್ಯ ಕೇಂದ್ರಗಳಿಗೆ ಪರಿಕರಗಳ ಬೇಡಿಕೆ ಇದ್ದು, ಅದನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಮೋದಿ ಅವರು ಭಾರತದ ಗೌರವವನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಭಗವಂತ ನೀಡಲಿ. ನರೇಂದ್ರ ಮೋದಿ ಎಂದರೆ ಅದು ಕೇವಲ ಒಂದು ಹೆಸರಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮತ್ತೊಂದು ಹೆಸರೇ ನರೇಂದ್ರ ಮೋದಿ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾಳಯ್ಯ, ಜಿಲ್ಲಾ ಉಪಾಧ್ಯಕ್ಷ ಪಿಚ್ಚನಕೆರೆ ಪಿ.ಎಸ್.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್, ನಾಗಮ್ಮ, ನಗರ ಅಧ್ಯಕ್ಷ ಚಂದನ್ ಮೋರೆ, ಮಹಿಳಾ ಅಧ್ಯಕ್ಷೆ ಹೇಮಾ ಶಿವರಾಂ, ಮುಖಂಡರಾದ ಆರ್.ವಿ.ಸುರೇಶ್, ರಾಜು, ಗೂಗಾರೆದೊಡ್ಡಿ ನಾಗರಾಜು, ಮಹದೇವಯ್ಯ, ದೇವಿಕಾ, ಹೇಮಲತಾ, ವರುಣ್, ಮಂಜು, ಪದ್ಮ, ಪುಟ್ಟಮ್ಮ, ಕಿಶನ್, ವಿ.ತೇಜು, ಲಕ್ಷ್ಮೀ, ಚನ್ನಪ್ಪ, ಮೋಹನ್, ಮಹೇಶ್, ಸಿದ್ದರಾಜು, ಭಾನುಪ್ರಕಾಶ್, ರಂಗಸ್ವಾಮಿ, ಹೇಮಾವತಿ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST