ರಾಮನಗರ: ಎಸ್‌ಐಆರ್ ವಿಚಾರದಲ್ಲಿ ಕೆಪಿಸಿಸಿ ಅಲರ್ಟ್ ಆಗಿ ಕೆಲಸ ಮಾಡುತ್ತಿದೆ, ನಾವು ಇಷ್ಟು ಸಕ್ರಿಯವಾಗುತ್ತೇವೆ ಎಂದು ನಿರೀಕ್ಷಿಸದ ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಭಾವನೆಗಳನ್ನು ಉದ್ರೇಕಿಸಿ ರಾಜಕಾರಣ ಮಾಡುವುದೇ ಬಿಜೆಪಿ ಜಾಯಮಾನ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ. ಆರ್. ಸುದರ್ಶನ್ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು, ಬಡವರು, ಅಲೆಮಾರಿಗಳು, ಅಲ್ಪಸಂಖ್ಯಾತರ ಮತ ಹಕ್ಕು ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದ ಉದ್ದೇಶ, ಕಾಂಗ್ರೆಸ್ ಪಕ್ಷ ಎಸ್.ಐ.ಆರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮನೆ ಮನೆ ಭೇಟಿ ನೀಡಿ ಮತದಾರರ ಹಕ್ಕು ಖಚಿತಪಡಿಸಿ ಫಾರಂ ಸಂಗ್ರಹಿಸುವ ಕೆಲಸ ಮಾಡುತ್ತಿದೆ ಎಂದರು.ನಮ್ಮ ಎಲ್ಲಾ ಬಿಎಲ್‌ಓಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ವಾರ್ ರೂಂ ಆರಂಭಿಸಿ ಪ್ರತಿ ಜಿಲ್ಲೆಗಳಿಗೂ ಎಸ್.ಐ.ಆರ್. ಮಾನಿಟರಿಂಗ್ ಸಮಿತಿ ರಚನೆ ಮಾಡಲಾಗಿದೆ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬಿಎಲ್‌ಓ ನೇಮಕದ ಬಗ್ಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ, ಇದರಿಂದ ಮತದಾರರಿಗೆ ಅನುಕೂಲವಾಗುತ್ತಿದೆ, ಪಕ್ಷದ ವತಿಯಿಂದ ಸಹಾಯವಾಣಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿಯವರು ಪಶ್ವಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ಹೇಗೆ ಉಪಯೋಗಿಸಿಕೊಳ್ಳಬೇಕೋ ಹಾಗೆ ಎಸ್‌ಐಆರ್ ಅನ್ನು ಅನುಕೂಲ ಮಾಡಿ ಕೊಂಡರು, ಕರ್ನಾಟಕ ರಾಜ್ಯದಲ್ಲಿ ಅವರ ನಿರೀಕ್ಷೆ ಹುಸಿಯಾಯಿತು. ಪಶ್ವಿಮ ಬಂಗಾಳ ಮತ್ತು ಬಿಹಾರದ ಚುನಾವಣೆಯಲ್ಲಿ ಪಡೆದ ಲಾಭವನ್ನು ರಾಜ್ಯದಲ್ಲೂ ಪಡೆಯಲು ಪ್ರಯತ್ನಪಟ್ಟರು. ಆದರೆ ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿಯಲ್ಲಿ ಇಷ್ಟೊಂದು ಆಸಕ್ತಿ ತೆಗೆದುಕೊಳ್ಳುತ್ತದೆ ಎಂಬುದನ್ನು ಅವರು ಊಹಿಸಿರಲಿಲ್ಲ ಎಂದರು.
ದೇಶದ ಎಲ್ಲಾ ಬೆಳವಣಿಗೆ, ಆಗುಹೋಗುಗಳನ್ನು ಅರ್ಥಮಾಡಿಕೊಂಡು ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ನಡೆ ನಿಮ್ಮ ರಕ್ಷಣೆ ಕಡೆ ಎಂಬ ಕಾರ್ಯಕ್ರಮ ನೀಡಿದ್ದರು. ಇದರ ಪರಿಣಾಮ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿಧಾನಸಭಾ ಅಭ್ಯರ್ಥಿಗಳು ಮತ್ತು 2024ರಲ್ಲಿ ಸರ್ಧಿಸಿದ್ದ ಲೋಕಸಭಾ ಅಭ್ಯರ್ಥಿಗಳು, ಡಿಸಿಸಿ, ಬ್ಲಾಕ್ ಅಧ್ಯಕ್ಷರುಗಳಿಗೆ ಜವಾಬ್ದಾರಿ ನೀಡಲಾಯಿತು. ರಾಜ್ಯದಲ್ಲಿರುವ 59 ಸಾವಿರ ಬೂತ್‌ಗಳಿಗೆ ನೀವು ಬಿಎಲ್‌ಓ-2 ಗಳನ್ನು ನೇಮಕ ಮಾಡಬೇಕೆಂದು ತಿಳಿಸಲಾಯಿತು ಎಂದು ವಿವರಿಸಿದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ಎಸ್‌ಐಆರ್ ಮಾಡಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಬಿಜೆಪಿಯವರು 2015ರಲ್ಲೇ ಈ ಕೆಲಸ ಮಾಡದೆ ನಿರ್ಲಕ್ಷ÷್ಯ ತೋರಿದರು. ಈ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಸರ್ಕಾರ ಎಸ್‌ಐಆರ್‌ಗೆ ಮುಂದಾಗಿದೆ. ಆದರೆ, ಅದನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಎಸ್‌ಐಆರ್ ಸಮಿತಿ ಉಸ್ತುವಾರಿ ನಿಜಾಂ ಫೌಜ್‌ದಾರ್, ಕಾನೂನು ಘಟಕದ ಅನಂತ ನಾಯಕ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ನಗರಸಭೆ ಸದಸ್ಯೆ ಪಾರ್ವತಮ್ಮ, ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಕೆ.ರಮೇಶ್ ನರಸಿಂಹಯ್ಯ, ದೀಲಿಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.