ಬಂಗಾರಪೇಟೆ: ಸಚಿವ ಸ್ಥಾನ ಸಿಗದ ಅಸಮಾಧಾನವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಬಂಗಾರಪೇಟೆ ಜನರನ್ನು ಬಲವಂತದ ಬಂದ್ಗೆ ಗುರಿಪಡಿಸಿದ್ದು, ಇದು ಪ್ರಜಾಪ್ರಭುತ್ವವಲ್ಲ, ಬಹಿರಂಗ ದಾದಾಗಿರಿ ಎಂದು ನಿಕಟ ಪೂರ್ವ ಸಂಸದ ಎಸ್. ಮುನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಕುವೆಂಪುವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಸಿಗದಿದ್ದರೆ ಹೋರಾಟವನ್ನು ಬೆಂಗಳೂರಿನ ಕಾಂಗ್ರೆಸ್ ಹೈಕಮಾಂಡ್ ಕಚೇರಿ ಅಥವಾ ಮುಖ್ಯಮಂತ್ರಿ ನಿವಾಸದ ಮುಂದೆ ನಡೆಸಬೇಕು. ಅದನ್ನು ಬಿಟ್ಟು ಬಂಗಾರಪೇಟೆಯ ವ್ಯಾಪಾರಿಗಳು, ರೈತರು, ದಿನಗೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರ ಬದುಕನ್ನು ಬಂದ್ ಹೆಸರಿನಲ್ಲಿ ಅಸ್ತವ್ಯಸ್ತಗೊಳಿಸಿರುವುದು ಜನವಿರೋಧಿ ರಾಜಕಾರಣದ ಪರಮಾವಧಿ ಎಂದು ಕಿಡಿಕಾರಿದರು.
ಬಂದ್ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ, ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ರಸ್ತೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆ ಕೂಡ ಮೌನ ವಹಿಸಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದು ಆರೋಪಿಸಿದರು.
ಕೋಲಾರ?ಚಿಕ್ಕಬಳ್ಳಾಪುರ ಭಾಗ ಈಗಾಗಲೇ ಬರದ ಬವಣೆಯಲ್ಲಿ ನರಳುತ್ತಿದೆ. ರೈತರು ನೀರಿಗಾಗಿ ಪರದಾಡುತ್ತಿರುವಾಗ, ರೈತರು ಬೆಳೆದ ತರಕಾರಿ, ಸೊಪುö್ಪ ಹಾಗೂ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ತಲುಪದಂತೆ ತಡೆಯುವ ಮೂಲಕ ಅವರ ಹೊಟ್ಟೆಗೆ ಹೊಡೆದಿರುವುದು ಕಾಂಗ್ರೆಸ್ನ ಅಮಾನವೀಯ ನಡೆ ಎಂದು ವಾಗ್ದಾಳಿ ನಡೆಸಿದರು. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದವರು, ಸಾರ್ವಜನಿಕರಿಗೆ ಬೆದರಿಕೆ ಹಾಕಿದವರು ಹಾಗೂ ರಸ್ತೆಗಳಲ್ಲಿ ಬೆಂಕಿ ಹಚ್ಚಿ ಭಯ ಸೃಷ್ಟಿಸಿದವರ ವಿರುದ್ಧ ಪೊಲೀಸರು ತಕ್ಷಣವೇ ಸುಮೋಟೋ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಮುನಿಸ್ವಾಮಿ, "ನಿಮ್ಮ ಸಂಸ್ಥೆಗಳು ಮಾತ್ರ ತೆರೆದಿರಲಿ, ಬಡವರ ಅಂಗಡಿಗಳು ಮಾತ್ರ ಮುಚ್ಚಿರಲಿ ಎಂಬುದು ಯಾವ ನ್ಯಾಯ? ಸಚಿವ ಸ್ಥಾನಕ್ಕಾಗಿ ಬಂಗಾರಪೇಟೆಯ ಜನರನ್ನು ಒತ್ತೆಯಾಳು ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ" ಎಂದು ಪ್ರಶ್ನಿಸಿದರು.ಬಳಿಕ ನಗರದ ಬಜಾರ್ ರಸ್ತೆಯಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿದ ಅವರು, ಯಾವುದೇ ಭಯವಿಲ್ಲದೆ ಅಂಗಡಿಗಳನ್ನು ತೆರೆಯುವಂತೆ ಧೈರ್ಯ ತುಂಬಿದರು. ನಂತರ ಪೊಲೀಸ್ ಠಾಣೆ ಎದುರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, "ಪೊಲೀಸ್ ಇಲಾಖೆ ತಕ್ಷಣವೇ ಮೈಕ್ ಮೂಲಕ ಅಂಗಡಿಗಳನ್ನು ತೆರೆಯಲು ಸೂಚಿಸಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಜನರ ಬದುಕಿನೊಂದಿಗೆ ಚೆಲ್ಲಾಟವಾಡುವವರನ್ನು ಬಂಗಾರಪೇಟೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಎಚ್ಚರಿಕೆ ನೀಡಿದರು. ಪುರಸಭೆ ಮಾಜಿ ಸದಸ್ಯ ಕಪಾಲಿ ಶಂಕರ್, ಹೊಸರಾಯಪ್ಪ, ದೊಡ್ಡ ವಲಗ ಮಾದಿ ಗ್ರಾಪಂ.ನಿಕಟ ಪೂರ್ವ ಉಪಾಧ್ಯಕ್ಷ ಹಾಗೂ ಜನ ನಿರ್ಣಯ ವೇದಿಕೆ ರಾಜ್ಯ ಉಪಾಧ್ಯಕ್ಷ, ಸಮಾಜ ಸೇವಕ ಜೀವನ್ ರೆಡ್ಡಿ, ಕಾರಹಳ್ಳಿ ನಾರಾಯಣಸ್ವಾಮಿ, ಜಯರಾಮ್, ರಂಗನಾಥ್, ಶ್ರೀನಿವಾಸ್, ಕೇಶವ, ಸುಕುಮಾರ್ ಉಪಸ್ಥಿತರಿದ್ದರು.