LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಿ: ಉಗ್ರಪ್ಪ


ತಿ.ನರಸೀಪುರ: ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಅವರು ಆಗ್ರಹಿಸಿರುವುದು ಸ್ವಾಗತರ್ಹ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಹೇಳಿದರು.
ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಡಿಕೇರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ ಸಮುದಾಯದ ಪ್ರಮಾಣ ಶೇ.17.1 ಹಾಗೂ ಎಸ್‌ಟಿ ಸಮುದಾಯದ ಪ್ರಮಾಣ ಶೇ.6.95ರಷ್ಟಿದೆ. ಪ್ರಸ್ತುತ ಎಸ್‌ಸಿಗೆ ಇರುವ ಶೇ.15 ಹಾಗೂ ಎಸ್‌ಟಿಗೆ ಇರುವ ಶೇ.3ರ ಮೀಸಲಾತಿಯನ್ನು ಕ್ರಮವಾಗಿ ಶೇ.17 ಹಾಗೂ ಶೇ.7ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯಡಿ ಬಜೆಟ್ ಅನುದಾನದಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಪಾಲು ನಿಗದಿಪಡಿಸಲಾಗುತ್ತಿದೆ. ಇದೇ ಮಾನದಂಡವನ್ನು ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲೂ ಅನುಸರಿಸಬೇಕು ಎಂದರು.
ಮೀಸಲಾತಿ ಭಿಕ್ಷೆಯಲ್ಲ; ಅದು ಭಾರತೀಯ ಸಂವಿಧಾನ ನೀಡಿರುವ ಹಕ್ಕು ಎಂದು ಪ್ರತಿಪಾದಿಸಿದ ಉಗ್ರಪ್ಪ, ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯ ಆಯೋಗವು 2020ರ ಜುಲೈ 2ರಂದು ಎಸ್‌ಸಿಗೆ ಶೇ.17 ಹಾಗೂ ಎಸ್‌ಟಿಗೆ ಶೇ.7 ಮೀಸಲಾತಿ ಹೆಚ್ಚಿಸಲು ಶಿಫಾರಸು ಮಾಡಿತ್ತು. ಬಳಿಕ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಆಯೋಗವೂ 2022ರ ಅಕ್ಟೋಬರ್ 7ರಂದು ಇದೇ ಶಿಫಾರಸನ್ನು ಪುನರುಚ್ಚರಿಸಿತ್ತು ಎಂದು ತಿಳಿಸಿದರು.
ಈ ಶಿಫಾರಸುಗಳ ಆಧಾರದ ಮೇಲೆ ರಾಜ್ಯ ಸರ್ಕಾರ 2022ರಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆ ಜಾರಿಗೊಳಿಸಿದೆ. ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ದೊರೆಯಲು ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಅಗತ್ಯವಿದೆ. ಈ ಕುರಿತು 2023ರ ಮಾರ್ಚ್ 23ರಂದು ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರೂ, ಇದುವರೆಗೆ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ಎಲ್ಲ ಪಕ್ಷಗಳ ಸಂಸದರು, ಶಾಸಕರು ಹಾಗೂ ಸಚಿವರನ್ನು ಒಳಗೊಂಡ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿಗೆ ಕೊಂಡೊಯ್ದು ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಶೇ.56ರ ಮೀಸಲಾತಿಗೆ ಸಂಬAಧಿಸಿದAತೆ ಕರ್ನಾಟಕ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಸಮರ್ಥ ವಕೀಲರನ್ನು ನೇಮಿಸಿ ಕಾನೂನು ಹೋರಾಟ ನಡೆಸಬೇಕು. ಅಗತ್ಯವಿದ್ದರೆ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ವಿಶೇಷ ಅರ್ಜಿ ಸಲ್ಲಿಸಿ ನ್ಯಾಯಯುತ ಮೀಸಲಾತಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳು ಮತ್ತು ಮುಖಂಡರ ತುರ್ತು ಸಭೆ ಕರೆದು ಈ ವಿಚಾರದಲ್ಲಿ ಸಮಗ್ರ ಚರ್ಚೆ ನಡೆಸಬೇಕು. ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವವರ ವಿರುದ್ಧ ಹಾಗೂ ಅಂತಹ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರಿಗಳ ವಿರುದ್ಧವೂ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳದ ಕುರಿತು ಸರ್ಕಾರವನ್ನು ಒತ್ತಾಯಿಸಲಾಗಿದೆ. ಮುಂದಿನ ಹಂತದಲ್ಲಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಸಂವಿಧಾನದ 9ನೇ ಅನುಸೂಚಿ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಉಗ್ರಪ್ಪ ತಿಳಿಸಿದರು.
ರಾಜ್ಯದ ಭೋವಿ ಸಮಾಜದ ಅರ್ಹರಿಗೆ ಎಸ್‌ಸಿ ಜಾತಿ ಪ್ರಮಾಣಪತ್ರ ನೀಡುವಲ್ಲಿ ಅಧಿಕಾರಿಗಳು ಅನಗತ್ಯ ತೊಂದರೆ ನೀಡದಂತೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿರುವುದು ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿಗೆ  ಅನುಕೂಲವಾಗಲಿದೆ  ಎಂದು ತಾಯೂರು  ಪ್ರಕಾಶ್ ಹೇಳಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಕಾರ್ಯಾಧ್ಯಕ್ಷ ಎಂ. ನರಸಿಂಹಯ್ಯ, ಜಯಶ್ರೀ ಗುಡ್ಡಕಾಯ್ಯ, ರಾಜಪ್ಪ, ತುಳಿಸಿರಾಂ ಹಾಗೂ ಪ್ರಕಾಶ್ ದೇಶಾಯಿ (ಬೆಳಗಾವಿ) ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST