ಶಿಡ್ಲಘಟ್ಟ ಗ್ರಾಮಾಂತರ: ತಾಲ್ಲೂಕಿನ ಮೇಲೂರಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರ ಕುರಿತು ಸ್ವತಃ ರಚಿಸಿದ ಕವನಗಳನ್ನು ವಾಚಿಸಿ, ಗುರುಗಳಿಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ನೃತ್ಯ ಮಾಡಿ, ಮಿಮಿಕ್ರಿ, ನಾಟಕದ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ತಾಯಿ ಜನ್ಮ ನೀಡಿದರೆ, ಗುರು ಜೀವನ ನೀಡುತ್ತಾರೆ. ಅಕ್ಷರ ಕಲಿಸಿದ ಗುರು, ಬದುಕಿನ ದಾರಿ ತೋರಿಸುವ ದೀಪ. ಇಂದು ನಾವು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಅದರ ಹಿಂದೆ ಒಬ್ಬ ಶಿಕ್ಷಕರ ಶ್ರಮ, ಆಶೀರ್ವಾದ ಇರುತ್ತದೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ಮಾನವೀಯತೆ ಬೆಳೆಸುವ ಶಿಲ್ಪಿಗಳು. ವಿದ್ಯಾರ್ಥಿ ಎಷ್ಟೇ ಪ್ರತಿಭಾವಂತನಾಗಿದ್ದರೂ ಸರಿಯಾದ ಮಾರ್ಗದರ್ಶನವಿಲ್ಲದೆ ಮುಂದೆ ಸಾಗಲು ಸಾಧ್ಯವಿಲ್ಲ. ಆ ಮಾರ್ಗದರ್ಶನ ನೀಡುವವರು ಗುರುಗಳೇ. ಆದ್ದರಿಂದ ಗುರುಗಳನ್ನು ಗೌರವಿಸುವುದು ನಮ್ಮ ಸಂಸ್ಕöÈತಿ, ನಮ್ಮ ಕರ್ತವ್ಯ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸರೋಜ.ಎಸ್.ಎಂ.ಅವರು ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭಾರತದ ಭವಿಷ್ಯ. ಇಂದಿನ ವಿದ್ಯಾರ್ಥಿಯೇ ನಾಳಿನ ವೈದ್ಯ, ಎಂಜಿನಿಯರ್, ಶಿಕ್ಷಕ, ರೈತ, ವಿಜ್ಞಾನಿ, ನಾಯಕ. ಮಕ್ಕಳು ಕೇವಲ ಅಂಕಗಳ ಹಿಂದೆ ಓಡದೆ, ಒಳ್ಳೆಯ ಸಂಸ್ಕಾರ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಬೆಳೆಸಿಕೊಳ್ಳಬೇಕು. ಮೊಬೈಲ್, ಸಾಮಾಜಿಕ ಜಾಲತಾಣಗಳ ವ್ಯಸನದಿಂದ ದೂರವಿದ್ದು, ಓದಿನಲ್ಲಿ, ಕ್ರೀಡೆಯಲ್ಲಿ, ಸಂಸ್ಕೃತಿಯಲ್ಲಿ ಮುಂದೆ ಬರಬೇಕು ಎಂದರು. ಶಾಲೆಯ ಮುಖ್ಯಶಿಕ್ಷಕ ಹೆಚ್.ಎಂ.ಭಾಸ್ಕರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಮೇಲೆ ತಮ್ಮ ಕನಸುಗಳನ್ನು ಹೇರದೆ, ಮಕ್ಕಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆ, ಶಿಕ್ಷಕರು, ಪೋಷಕರು ಮೂವರೂ ಒಂದಾಗಿ ನಡೆದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಲ್ಲೂ ಅಪಾರ ಪ್ರತಿಭೆ ಇದೆ. ಅದಕ್ಕೆ ಸರಿಯಾದ ಅವಕಾಶ, ಪ್ರೋತ್ಸಾಹ ಸಿಕ್ಕರೆ ಅವರು ರಾಜ್ಯ, ದೇಶಕ್ಕೆ ಕೀರ್ತಿ ತರುತ್ತಾರೆ ಎಂದರು. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪುನೀತ್ ರಾಜ್ಕುಮಾರ್ ಅವರ ನೆನಪಿನಲ್ಲಿ ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಅವರು ತಲಾ 5 ಸಾವಿರದಂತೆ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂಪತ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ್, ಚಂದ್ರಪ್ಪ, ಮಾಜಿ ಅಧ್ಯಕ್ಷೆ ನಂದಿನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.