ಮಲೆ ಮಹದೇಶ್ವರರ ಚರಿತ್ರೆ ಕುರಿತು ಡಾ.ಎಸ್.ಶಿವರಾಜಪ್ಪ ಉಪನ್ಯಾಸ
ತಿ. ನರಸೀಪುರ: ಶರಣರು ಭಕ್ತಿ, ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯದ ಮೂಲಕ ನಾಡಿನಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಏಕತೆ ಸಾಧಿಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ತಿಳಿಸಿದರು. ಶ್ರೀ ನಂಜುಂಡಸ್ವಾಮಿಗಳ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಪರಮಪೂಜ್ಯ ಶ್ರೀ ನಂಜುಂಡಸ್ವಾಮಿಗಳ 17ನೇ ವರ್ಷದ ಸಂಸ್ಮರಣೋತ್ಸವ ಹಾಗೂ ಕಾರ್ತಿಕ ದೀಪೋ ತ್ಸವದ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮೈಸೂರು ಮತ್ತು ಮಂಡ್ಯ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲೆ ಮಹದೇಶ್ವರರು ಶ್ರೀಶೈಲದಿಂದ ಚಾಮರಾಜನಗರ, ಮೈಸೂರು ಭಾಗಕ್ಕೆ ಆಗಮಿಸಿ ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಸುಧಾರಣೆಯ ಅರಿವು ಮೂಡಿಸಿದ್ದಾರೆ. ಕಮ್ಮಗೇರೇಶ್ವರರು, ಮಹಾತ್ಮ ಶ್ರೀ ಗುರುಮಲ್ಲೇಶ್ವರರು ಸೇರಿದಂತೆ ಅನೇಕ ಸಂತರು ಸಾಮರಸ್ಯ ಬೆಳೆಸಿದ್ದಾರೆ. ಬಸವಾದಿ ಶಿವಶರಣರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದರು.ವಿಶೇಷ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಮೈಸೂರು ಗಾಂಧಿ ಭವನದ ನಿರ್ದೇಶಕ ಡಾ. ಎಸ್. ಶಿವರಾಜಪ್ಪ, ಮಲೆ ಮಹದೇಶ್ವರರ ಸಂಪೂರ್ಣ ಚರಿತ್ರೆ ವಿವರಿಸಲು 12 ಹಗಲು, 12 ರಾತ್ರಿ ಬೇಕಾಗುತ್ತದೆ. ಅವರ ಜೀವನ, ಆಧ್ಯಾತ್ಮಿಕ ಸಾಧನೆ ಮತ್ತು ಪವಾಡಗಳು ಅಪಾರವಾದವು ಎಂದರು. ಶರಣ ಚಂದ್ರಶೇಖರ ಮೂರ್ತಿ, ಉತ್ತರಾಜಮ್ಮನವರಿಗೆ ಬಾಲ ಮಹದೇಶ್ವರರು ಜನಿಸಿದ ಪ್ರಸಂಗ, ಶಿರಸಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಶೀರ್ವಾದ, ಸರಿಗೆಯ ರಾಮಯ್ಯ, ಮೂಗಯ್ಯ, ಹಾಲೂರಿನ 108 ಹೆಣ್ಣುಮಕ್ಕಳ ಅಭಿಷೇಕ, ಆಲೂರು, ತಿರುಪತಿಯ ಪವಾಡಗಳನ್ನು ವಿವರಿಸಿದರು. ಮಂಟೇಸ್ವಾಮಿ, ಬಸವಲಿಂಗ ರಂಗಸ್ವಾಮಿ, ಗುರುಮಲ್ಲೇಶ್ವರರು, ಕಂಬಳೇಶ್ವರರ ಕೊಡುಗೆಯನ್ನೂ ಸ್ಮರಿಸಿ, ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಪಾದಯಾತ್ರೆ ತೆರಳುವುದು ಅಚಲ ನಂಬಿಕೆಯ ಸಂಕೇತ ಎಂದರು.ಹೊಸಮಠ ಸರಗೂರಿನ ಶ್ರೀ ಬಸವರಾಜೇಂದ್ರ ಸ್ವಾಮಿಗಳು ದಿವ್ಯ ನೇತೃತ್ವ ವಹಿಸಿ, 2009ರ ಅಕ್ಟೋಬರ್ 31ರಂದು ಲಿಂಗೈಕ್ಯರಾದ ಶ್ರೀ ನಂಜುಂಡಸ್ವಾಮಿಗಳ ಸ್ಮರಣೆ, ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಹಾಗೂ ಮಕ್ಕಳಿಗೆ ಧರ್ಮ, ಸಂಸ್ಕಾರ ಕಲಿಸುವ ಅಗತ್ಯ ತಿಳಿಸಿದರು. ಗುರುಗಳಿಗೆ ಪ್ರಿಯವಾದ ಬಿದಿರು ಕಾಳಿನ ಸಾಂಬಾರ್ ಭಕ್ತರಿಗೆ ಬಡಿಸಲಾಯಿತು.ಶ್ರೀ ಕ್ಷೇತ್ರ ಮಲ್ಲನಮೂಲೆ ಮಠದ ಶ್ರೀ ಇಮ್ಮಡಿ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಮೃಗತ್ವ, ಮನುಷ್ಯತ್ವದಿಂದ ಉತ್ತಮ ಗುಣಗಳ ಮೂಲಕ ದೈವತ್ವದತ್ತ ಸಾಗುವುದೇ ಜೀವನದ ಸಾರ್ಥಕತೆ ಎಂದರು.ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಶಿವಪ್ರಕಾಶ್ ಉದ್ಘಾಟನಾ ನುಡಿಗಳನ್ನಾಡಿದರು. ಹರಗುರು ಚರಮೂರ್ತಿಗಳು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಬಿಜಿಪುರದ ಕರಿಬಸವೇಶ್ವರ ಭಜನಾ ಸಂಘದಿAದ ಭಜನೆ ನಡೆಯಿತು. ತಿ.ನರಸೀಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ಮೈಸೂರು ಜಿಲ್ಲಾ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮಳವಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ. ಮಹದೇವಪ್ಪ, ಮಿಲ್ಟಿç ಸುರೇಶ್, ಜಗದೀಶ್ ದೇವನೂರು, ಪುರಸಭೆ ಮಾಜಿ ಸದಸ್ಯೆ ರೂಪ ಪರಮೇಶ್, ವಕೀಲ ಕೇತಹಳ್ಳಿ ಪರಮೇಶ್, ಜಯ ಕರ್ನಾಟಕ ಮಹಿಳಾ ಜಿಲ್ಲಾಧ್ಯಕ್ಷೆ ಎಲ್.ಪಿ. ರೇವತಿ ಬನ್ನೂರು, ಮಾಯಪ್ಪ, ಬಜ್ಜಿ ನಿಂಗಪ್ಪ, ಮಹದೇವಪ್ಪ, ಅಯ್ಯಪ್ಪ, ಸಿದ್ದಲಿಂಗಸ್ವಾಮಿ ಸೇರಿದಂತೆ ಗಣ್ಯರು, ಭಕ್ತರು ಉಪಸ್ಥಿತರಿದ್ದರು.