ಉತ್ತರ ಕನ್ನಡ: ವಾರಾಂತ್ಯದ ಮೋಜು-ಮಸ್ತಿಗಾಗಿ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳ ತಂಡದ ಪ್ರವಾಸ ದುರಂತಮಯವಾಗಿ ಕೊನೆಗೊಂಡಿದೆ. ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಐವರು ಉದ್ಯೋಗಿಗಳು ಕೊಚ್ಚಿಹೋಗಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿತ್ತು. ದುಬ್ಬಣಶಶಿ ಬೀಚ್‌ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಸಿಲುಕಿ ಕೊಚ್ಚಿಹೋಗಿದ್ದರು.