ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮುರಸು ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನವೆಂಬರ್ 3ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.ಇಂದು ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದ್ದು, ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 120 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಭಾನುವಾರ ಮಧ್ಯಾಹ್ನ 2.30ರವರೆಗಿನ ಆರು ಗಂಟೆಗಳ ಅವಧಿಯಲ್ಲಿ ಚಂಡಮಾರುತವು ಗಂಟೆಗೆ 27 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸಿದೆ. ಚೆನ್ನೆöÊ ನಿಂದ ಸುಮಾರು 480 ಕಿ.ಮೀ, ನೆಲ್ಲೂರಿನಿಂದ 550 ಕಿ.ಮೀ, ಮಚಲಿಪಟ್ಟಣಂನಿಂದ 560 ಕಿ.ಮೀ, ಒಂಗೋಲ್‌ನಿಂದ 600 ಕಿ.ಮೀ ಹಾಗೂ ವಿಶಾಖಪಟ್ಟಣಂನಿಂದ 610 ಕಿ.ಮೀ ದೂರದಲ್ಲಿ ಚಂಡಮಾರುತವಿದೆ ಎಂದು ಐಎಂಡಿ ತಿಳಿಸಿದೆ.ಚಂಡಮಾರುತವು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿ ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ನಂತರ ವಾಯವ್ಯ ದಿಕ್ಕಿನಲ್ಲಿ ಚಲಿಸಿ, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ನೆಲ್ಲೂರು ಮತ್ತು ನರಸಾಪುರಂ ನಡುವಿನ ಪ್ರದೇಶದಲ್ಲಿ ಕರಾವಳಿ ದಾಟುವ ನಿರೀಕ್ಷೆಯಿದೆ. ಇಂದು ರಾತ್ರಿ 11.30ರಿಂದ ನಾಳೆ ಬೆಳಗಿನ ಜಾವ 4 ಗಂಟೆಯ ನಡುವೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.