ಅಮರಾವತಿ: ಆಂಧ್ರಪ್ರದೇಶ ಕರಾವಳಿಗೆ ಇಂದು ಮುಂಜಾನೆ 'ಅರ್ನಬ್' ಅತ್ಯಂತ ತೀವ್ರ ಸ್ವರೂಪದ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿಯನ್ನು ದಾಟುವ ಪ್ರಕ್ರಿಯೆ ಇನ್ನೂ 2ರಿಂದ 3 ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಅತ್ಯಂತ ತೀವ್ರ ಸ್ವರೂಪದ ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ಯಾನಂನ ದಕ್ಷಿಣ ಭಾಗದ ಸಮೀಪ ಕರಾವಳಿಗೆ ಅಪ್ಪಳಿಸಿದೆ. ಈ ವೇಳೆ ಗಂಟೆಗೆ 125ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಬಿರುಗಾಳಿಯ ವೇಗ ಗಂಟೆಗೆ 150 ಕಿ.ಮೀ.ವರೆಗೆ ತಲುಪಿದೆ.ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುತ್ತಿದ್ದು, ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.ಹವಾಮಾನ ಇಲಾಖೆ ಇಂದು ನಸುಕಿನ ಜಾವ 5.30ಕ್ಕೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಅತ್ಯಂತ ತೀವ್ರ ಸ್ವರೂಪದ ಚಂಡಮಾರುತ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದೆ. ಇದು ನರಸಾಪುರದಿಂದ ಸುಮಾರು 30 ಕಿ.ಮೀ. ಪೂರ್ವಕ್ಕೆ, ಯಾನಂನಿಂದ 45 ಕಿ.ಮೀ. ದಕ್ಷಿಣ-ನೈಋತ್ಯಕ್ಕೆ ಹಾಗೂ ಕಾಕಿನಾಡದಿಂದ 70 ಕಿ.ಮೀ. ದಕ್ಷಿಣ-ನೈಋತ್ಯಕ್ಕೆ ನೆಲೆಗೊಂಡಿದೆ.ಚಂಡಮಾರುತದ ಉತ್ತರ ಭಾಗದ ಸುರುಳಿಯಾಕಾರದ ಮೋಡಗಳ ಪಟ್ಟಿಯು ಮತ್ತಷ್ಟು ಒಳನಾಡಿನತ್ತ ಚಲಿಸಿದ್ದು, ಚಂಡಮಾರುತದ ಕೇಂದ್ರ ಭಾಗವು ಕರಾವಳಿಯ ಸಮೀಪದಲ್ಲಿಯೇ ಉಳಿದಿದೆ.ಹಲವು ಜಿಲ್ಲೆಗಳಲ್ಲಿ 200 ಮಿ.ಮೀ.ಗೂ ಅಧಿಕ ಮಳೆ ಅನಕಾಪಲ್ಲಿ, ವಿಶಾಖಪಟ್ಟಣಂ, ಕಾಕಿನಾಡ ಮತ್ತು ಕೋನಸೀಮಾ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ವ್ಯಾಪಕ ಹಾನಿ ಸಂಭವಿಸಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.