ಶಿಡ್ಲಘಟ್ಟ: ಉತ್ತಮ ಸಮಾಜದ ನಿರ್ಮಾಣ ಪತ್ರಕರ್ತರ ಬಹು ಮುಖ್ಯ ಹೊಣೆಗಾರಿಕೆ ಆಗಿರುತ್ತದೆ. ಪತ್ರಿಕೆಗಳು ಸಮಾಜದ ಕನ್ನಡಿಯಂತೆ ಇರಬೇಕು. ಪತ್ರಕರ್ತರು ಕಣ್ಣಿಗೆ ಕಂಡ ದೃಶ್ಯಗಳನ್ನು ಕಿವಿಯಲ್ಲಿ ಕೇಳಿದ ವಿಷಯಗಳನ್ನು ಪ್ರಮಾಣಿಸಿ ಸತ್ಯವನ್ನು ಬರೆದಾಗ ಪತ್ರಕರ್ತರಿಗೆ ಇರುವ ಘನತೆ ಗೌರವ ಮತ್ತಷ್ಟು ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ರಾಜ್ಯ ಸಂಪಾದಕರು ಮತ್ತು ವರದಿಗಾರರ ಸಂಘದ ಉಪಾಧ್ಯಕ್ಷೆ ಹಾಗೂ ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಕರೆ ನೀಡಿದರು.ಅವರು ಇಂದು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಸಂಪಾದಕರು ಮತ್ತು ವರದಿಗಾರರ ಸಂಘದ ಐದನೇ ವಾರ್ಷಿಕೋತ್ಸವ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ನೈತಿಕತೆ ಮತ್ತು ಸಮಾಜದ ಹಿತ ಚಿಂತನೆಯ ಹಾದಿಯಲ್ಲಿ ಪತ್ರಕರ್ತರು ನಡೆಯಬೇಕಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಹೊಗಳುವ ಅಥವಾ ತೆಗಳುವ ಹಾದಿಯಲ್ಲಿ ವರದಿಗಳನ್ನು ಸಿದ್ಧಪಡಿಸಬಾರದು. ಅಂತಹ ಪತ್ರಕರ್ತರಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗುವುದಿಲ್ಲ. ಅಂತಹ ಪತ್ರಿಕೆಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಕರ್ನಾಟಕ ರಾಜ್ಯ ಸಂಪಾದಕರ ಮತ್ತು ವರದಿಗಾರರ ಸಂಘ ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉತ್ತಮ ಪತ್ರಕರ್ತರನ್ನು ಸಿದ್ಧಪಡಿಸುವ ತರಬೇತಿ ಕಾರ್ಯಗಾರಗಳನ್ನು ಮಾಡುವ ಅಪೇಕ್ಷೆಯನ್ನು ಹೊಂದಿದೆ. ಪತ್ರಕರ್ತರ ನೈಪುಣ್ಯತೆ ಮತ್ತು ಕೌಶಲ್ಯ ಜೊತೆಗೆ ಜ್ಞಾನವನ್ನು ವೃದ್ಧಿಸುವ ವಿಶೇಷ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಸಮಾಜಸೇವಕರಾದ ಬಳುವನಹಳ್ಳಿ ಸಿ.ವಿ. ಲೋಕೇಶ್ ಗೌಡ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಹಲವಾರು ದೇಶಗಳನ್ನು ನಾನು ನೋಡಿದ್ದೇನೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ನನ್ನ ಜನ್ಮ ಭೂಮಿ ಹಾಗೂ ಕರ್ಮಭೂಮಿಯಾಗಿದೆ. ಇಂಜಿನಿಯರಿAಗ್ ಪದವಿ ಮುಗಿಸಿದ್ದ ನಾನು ನನ್ನ ಬದುಕು ಕಟ್ಟಿಕೊಳ್ಳಲು ಯೋಚಿಸಲಿಲ್ಲ. ನನ್ನ ಅನುಭವ ಮತ್ತು ಅಧ್ಯಯನದ ಜೊತೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಹಿಂದೆಯೇ ನನ್ನ ರಾಜಕೀಯ ಸೇವೆಯನ್ನು ಮಾಡಿದ್ದೇನೆ. ಅನುಭವಿ ರಾಜಕಾರಣಿಗಳಾದ ವಿ ಮುನಿಯಪ್ಪ ಮತ್ತು ಎಸ್. ಮುನಿಶಾಮಪ್ಪ ಅವರ ನಡುವೆ ತಾಲೂಕಿನ ಜನಸಾಮಾನ್ಯರ ನಡುವೆ ನನ್ನದೇ ಆದ ಸೇವೆ ಮತ್ತು ಅನುಭವಗಳನ್ನು ಪಡೆದಿದ್ದೇನೆ. ನನ್ನ ಸೇವೆಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಹಲವಾರು ಪತ್ರಕರ್ತರನ್ನು ನಾನು ಸ್ಮರಿಸುತ್ತೇನೆ.
ಅವರ ಸಹಕಾರ ನನ್ನನ್ನು ಸಮಾಜ ಸೇವೆ ಮತ್ತು ರಾಜಕಾರಣದತ್ತ ಬರಲು ಆಕರ್ಷಣೆ ಮಾಡಿತು. ಪತ್ರಕರ್ತರು ಯಾವುದೇ ವ್ಯಕ್ತಿಯ ಪರವಾಗಲಿ, ಪಕ್ಷದ ಪರವಾಗಲಿ, ಸರ್ಕಾರದ ಪರವಾಗಲಿ ನಿಲ್ಲಬಾರದು. ನನ್ನ ಜನ್ಮಭೂಮಿ ಇದೇ ತಾಲೂಕು. ನನ್ನ ಕರ್ಮ ಭೂಮಿಯೂ ಇಲ್ಲಿಯೇ ಇರಬೇಕೆಂಬುದು ಜನರ ಅಭಿಲಾಷೆಯಾಗಿದೆ ಎಂದು ಹೇಳಿದರು.ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪಕ್ಷದ ಸಂಯೋಜಕರಾದ ರಾಜೀವ್ ಗೌಡ ಅವರು ಮಾತನಾಡಿ ಕ್ಷೇತ್ರದಲ್ಲಿ ನಾನು ಜನರ ಸೇವೆಗೆ ಮಾಡಿರುವ ಸಮಯವನ್ನು ನೆನಪಿಸಿಕೊಂಡಾಗ ಸಂತೋಷವಾಗುತ್ತದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ಸಮಾಜ ಸೇವೆಗೆಂದು ಬಂದವನು ನಾನು. ನನ್ನನ್ನು ಇಲ್ಲಿನ ಪತ್ರಕರ್ತರೇ ರಾಜಕಾರಣಕ್ಕೆ ಬರುವಂತೆ ದಾರಿ ತೋರಿಸಿದರು. ಜನರು ಸಹ ಶ್ರಮಜೀವಿಗಳು. ರೈತಪಿ ವರ್ಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಹುತೇಕ ಪತ್ರಕರ್ತರು ತಮ್ಮ ಬದುಕನ್ನು ಮರೆತು ಸಮಾಜದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಅವರ ಹಿನ್ನೆಲೆ ಮತ್ತು ಆರ್ಥಿಕ ಪರಿಸ್ಥಿತಿ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಅವರಿಗೆ ಸದೃಢವಾದ ಆರ್ಥಿಕ ನೆಲೆಗಟ್ಟನ್ನು ಕಲ್ಪಿಸುವ ಮತ್ತು ನೆಮ್ಮದಿಯ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ನೆರವನ್ನು ಕೊಡಿಸಬೇಕು. ಈ ನಿಟ್ಟಿನಲ್ಲಿ ನನ್ನಿಂದ ಆಗುವ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.ಮಾಜಿ ಶಾಸಕ ಎಂ ರಾಜಣ್ಣ ಅವರು ಮಾತನಾಡಿ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಾಗ ಉತ್ತಮ ಸಮಾಜಕ್ಕೆ ಅವರ ಕೊಡುಗೆ ಪರಿಣಾಮಕಾರಿಯಾಗಿ ಸಿಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರನ್ನು ಮತ್ತು ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.