ತಿ.ನರಸೀಪುರ: ತಾಲ್ಲೂಕಿನ ಸೋಸಲೆ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಕ್ಷೇತ್ರ ತೋಪಿನ ಮಠದಲ್ಲಿ ಆ. 30ರ ಭಾನುವಾರ ಶ್ರೀ ಷಡಕ್ಷರ ಮಹಾ ಶಿವಯೋಗಿಗಳವರ 73 ನೇ ವರ್ಷದ ಆರಾಧನಾ ಮಹೋತ್ಸವ, ಲಿಂಗೈಕ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ 13 ನೇ ವರ್ಷದ ಸಂಸ್ಮರಣೋತ್ಸವ ಮತ್ತು ಶ್ರೀ ಷಡಕ್ಷರ ಮಹಾ ಶಿವ ಯೋಗಿಗಳವರ ಗದ್ಧಿಗೆಯ ವಿಮಾನ ಗೋಪುರ ಕಳಶಾರೋಹಣ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಕನಕಪುರ ಮರಳೆಗವಿ ಮಠದ ಶ್ರೀ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿರುವ ಮಂಗಳ ಮಂಟಪದಲ್ಲಿ ಗುರುವಾರ ಕಾರ್ಯಕ್ರಮದ ಅಂತಿಮ ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮೈಸೂರು ಪ್ರವಾಸ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನಾಂಕ 29 ನಾಳೆ ಶನಿವಾರ ಮಧ್ಯಾಹ್ನ ಆಗಮಿಸಿ ವಿಮಾನ ಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು. ಮಠದ ಆವರಣದಲ್ಲಿ ಭಾನುವಾರ ಬೆಳಗ್ಗೆ 11ಗಂಟೆಗೆ ಆಯೋಜನೆಗೊಂಡಿರುವ ಧಾರ್ಮಿಕ ಸಮಾರಂಭ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದಿವ್ಯ ನೇತೃತ್ವವನ್ನು ಮರಳೆ ಗವಿಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ, ದಿವ್ಯ ಸಮ್ಮುಖವನ್ನು ದೇಗುಲ ಮಠದ ಡಾ.ಚನ್ನಬಸವ ಸ್ವಾಮೀಜಿ ವಹಿಸಲಿದ್ದು, ದೇವನೂರು ಮಠದ ಮಹಾಂತ ಸ್ವಾಮೀಜಿ, ವಾಟಾಳ್ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲನಮೂಲೆ ಮಠದ ಇಮ್ಮಡಿ ಕಂಬಳೀಶ್ವರ ಸ್ವಾಮೀಜಿ ದಿವ್ಯ ಉಪಸ್ಥಿತಿ ಇರುವರು. ಮುಖ್ಯ ದ್ವಾರವನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಸಭಾ ಉದ್ಘಾಟನೆಯನ್ನು ಬೆಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಹೆಚ್.ಸಿ.ಮಹದೇವಪ್ಪ, ವ್ಯಾಸ ವಿವಿಯ ಉಪ ಕುಲಪತಿ ಡಾ.ಹೆಚ್.ಆರ್.ದಯಾನಂದಸ್ವಾಮಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ನಟರಾಜಪ್ಪ, ಉದ್ಯಮಿ ಎಸ್. ಸಚ್ಚಿದಾನಂದಮೂರ್ತಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು ಎಂದರು.ಮಠದಲ್ಲಿ ಗುರುವರದಿಂದಲೇ ಧಾರ್ಮಿಕ ಉತ್ಸವಗಳು ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಗಂಗಾ ಪೂಜೆ, ಮಂಗಳ ಕಳಶ, ಸವತ್ಸಧೇನುವಿನೊಂದಿಗೆ ಆಲಯ ಪ್ರವೇಶ ನಂತರ ಸಕಲ ದೇವತೆಗಳ ಕಳಶ ಸ್ಥಾಪನೆ, ಆ.28ರ ಶುಕ್ರವಾರ ಬೆಳಗ್ಗೆ 6.15ಕ್ಕೆ ಮಹಾಸಂಕಲ್ಪ ವೇಧಿಕಾರ್ಚನೆ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ ಪುಣ್ಯಹ, ದೇವನಾಂದಿ, ಪಂಚ ಕಳಶಾರಾಧನೆ. ನವಗ್ರಹಾರಾಧನೆ, ಅಷ್ಟದಿಕ್ಪಾಲಕರ ಪೂಜೆ, ದುರ್ಗಾ ಪೂಜೆ, ಉಮಾಮಹೇಶ್ವರಿ ಪೂಜೆ, ಶಿಖರದ ನೂತನ ಕಳಶಕ್ಕೆ ಪಂಚಗವ್ಯ ಶುದ್ಧಿ, ಫಲಪುಷ್ಪಧಿವಾಸ. ಆ.29ರ ಶನಿವಾರ ಬೆಳಗ್ಗೆ 9.30 ಗಂಟೆಗೆ ಮಹಾ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ಹಾಗೂ ರುದ್ರ ಹೋಮ, ಪೂರ್ಣಾಹುತಿ, ಶ್ರೀಗಳವರ ಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. 30ರ ಭಾನುವಾರ ಬೆಳಗ್ಗೆ 4.30 ಗಂಟೆಗೆ ಶ್ರೀ ಷಡಕ್ಷರ ಮಹಾ ಶಿವಯೋಗಿಗಳ ಹಾಗೂ ವಿರೂಪಾಕ್ಷ ಮಹಾ ಸ್ವಾಮಿಗಳವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಬೆಳಗ್ಗೆ 7 ಗಂಟೆಗೆ ಮರಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮೀಗಳವರ ಶಿವಪೂಜೆ ಹಾಗೂ ಪಾದಪೂಜೆಯೊಡನೆ ಬೆಳಗ್ಗೆ 10 ಗಂಟೆಗೆ ವಿಮಾನ ಗೋಪುರದ ಮಹಾ ಕಳಶ ಸ್ಥಾಪನೆ ಹಾಗೂ ಕುಂಭಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಮುಡುಕುತೊರೆ ತೋಪಿನ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸುವರು. ಷಟಸ್ಥಲ ಧ್ವಜಾರೋಹಣವನ್ನು ಸಿದ್ಧರಹಳ್ಳಿ ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೆರವೇರಿಸುವರು ಎಂದು ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು. ಹಲವಾರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಮುಡುಕುತೊರೆ ತೋಪಿನ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಭೆಯಲಿ ್ಲ ಸರಗೂರು ಹೊಸಮಠದ ಶ್ರೀ ಬಸವರಾಜೇಂದ್ರ ಸ್ವಾಮಿಜೀ, ಹಣಕೊಳ ಮಠದ ಶ್ರೀ ಚಿದ್ಘನ ಸ್ವಾಮೀಜಿ, ಶ್ರೀ ತೊಪಿನ ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ನಟರಾಜಪ್ಪ, ಉಪಾಧ್ಯಕ್ಷ ಮುಗೂರು ಸುಧಾಕರ್, ಟಿ. ಎಸ್.ಶಾಂತಕುಮಾರ್ (ಜಿಪ್ಪಿ), ಮುರುಡೇಶ್,ಎನ್.ರಿಚ್. ಮಹದೇವಸ್ವಾಮಿ,ಅಂಗಡಿ ಶೇಖರ್, ಮೋಹನ್, ಚಿದರವಳ್ಳಿ ನವೀನ,ಶಂಕರ್,ಮಹೇಶ್,ಶಿವಪ್ರಸಾದ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಮುಖಂಡರಾದ ಅಕ್ಕಿ ನಾಗಪ್ಪ, ಪೋಸ್ಟ್ ರಾಜಪ್ಪ, ನರಗ್ಯಾತನಹಳ್ಳಿ ಕುಮಾರಸ್ವಾಮಿ, ಮುಡುಕನಪುರ ನಾಗಭೂಷಣ್, ಶ್ರೀಕಂಠಸ್ವಾಮಿ, ಮಹದೇವಸ್ವಾಮಿ, ಪ್ರಭುಸ್ವಾಮಿ, ಮಲ್ಲು, ನೂತನ್ ಸೇರಿದಂತೆ ಮತ್ತಿತರರು ಹಾಜರಿದ್ದರು.