ಬೆಂಗಳೂರು: ನಿನ್ನೆ ದೀಢರ್ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿ ನಾನಾ ತರಹದ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕುಮಾರಸ್ವಾಮಿ ಅವರು ರಾಜ್ಯದ ಯಾವುದೇ ಬಿಜೆಪಿ ಮುಖಂಡರೊಂದಿಗೆ ಚರ್ಚಿಸದೆ ತಮ್ಮ ಪುತ್ರ ನಿಖಿಲ್‌ಕುಮಾರಸ್ವಾಮಿ ಅವರೊಂದಿಗೆ ದಿಢೀರ್ ಎಂದು ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಮತ್ತೆ ರಾಜ್ಯಕ್ಕೆ ವಾಪಸ್ ಆಗಿರುವ ಉದ್ದೇಶ ಏನು ಎಂದು ಚರ್ಚೆ ನಡೆಯುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆ ಸಂಬಂಧ ಪೂರ್ವಾಭಾವಿಯಾಗಿ ಚರ್ಚಿಸಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದಿದ್ದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಮೋದಿ ಅವರನ್ನು ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿದ್ದು, ಇದರ ಉದ್ದೇಶ ಏನು ಎಂದು ಪ್ರಶ್ನೆಗಳು ಉದ್ಭವಿಸಿವೆ. ಅತೀ ಶೀಘ್ರದಲ್ಲಿ ರಾಜ್ಯದಲ್ಲಿ ಎದುರಾಗಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರೊಂದಿಗೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪೂರ್ವಭಾವಿಯಾಗಿ ತಮ್ಮ ಇಂಗಿತವನ್ನು ಹೆಚ್ಡಿಕೆ ವಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆ ಕ್ಷೇತ್ರದಲ್ಲಿ ಒಕ್ಕಲಿಗರ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಹಾಗಾಗಿ ಆಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲು ಬಿಜೆಪಿ ಮುಖಂಡರು ಸಮ್ಮತಿಸಿದ್ದಲ್ಲಿ ತಮ್ಮ ಪುತ್ರ ನಿಖಿಲ್ ಅವರನ್ನೇ ಅಭ್ಯರ್ಥಿಯನ್ನಾಗಿಸಲು ಕುಮಾರಸ್ವಾಮಿ ಒಲವು ಹೊಂದಿದ್ದಾರೆ. ಹಾಗಾಗಿ ಈ ವಿಷಯವನ್ನು ನೇರವಾಗಿಯೇ ಮೋದಿ ಅವರ ಬಳಿ ಪ್ರಸ್ತಾಪ ಮಾಡಿದ್ದಾರೆ. ಎನ್ನಲಾಗುತ್ತಿದೆ.