ಬೆಂಗಳೂರು: ರಾಜಕೀಯವಾಗಿ ಬೆಳೆಯಲು ಆಸಕ್ತಿ ಇರುವ ಮಾದಿಗ ಸಮುದಾಯದ ಎರಡನೇ ಹಂತದ ನಾಯಕರನ್ನು ಬೆಳೆಸುವುದು ಹಾಗೂ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಪಕ್ಷಾತೀತವಾಗಿ ನಾಯಕತ್ವದ ತರಬೇತಿ ನೀಡಿ, ಅವರನ್ನು ರಾಜಕೀಯವಾಗಿ ಶಕ್ತಿಶಾಲಿಯಾಗಿಸುವುದು ಕರ್ನಾಟಕ ಶಕ್ತಿ ಕೇಂದ್ರದ ಮೂಲ ಉದ್ದೇಶವಾಗಿದೆ ಎಂದು ಶಕ್ತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಆರ್. ಬಿ. ತಿಮ್ಮಾಪುರ್ ತಿಳಿಸಿದ್ದಾರೆ.ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಕ್ತಿ ಕೇಂದ್ರದ ಕೇಂದ್ರ ಕಛೇರಿಯಲ್ಲಿ ಜರುಗಿದ ಜಿಲ್ಲಾ ಸಂಚಾಲಕರ, ವಲಯ ಉಸ್ತುವಾರಿಗಳ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಶಕ್ತಿ ಕೇಂದ್ರವು ರಾಜ್ಯದ ಉದ್ದಗಲಕ್ಕೂ ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೆಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್. ಬಿ. ತಿಮ್ಮಾಪುರ್ ಅವರು, “ನನಗೆ ಸಚಿವ ಸ್ಥಾನ ತಪ್ಪಿರುವ ಬಗ್ಗೆ ನಮ್ಮ ಸಂಘಟನೆಯ ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ. ಕರ್ನಾಟಕ ಶಕ್ತಿ ಕೇಂದ್ರದ ಮೂಲಕ ರಾಜ್ಯದಾದ್ಯಂತ ಬಲಿಷ್ಠ ಸಂಘಟನೆ ಮಾಡುವುದು ಮತ್ತು ನಮ್ಮ ಸಮುದಾಯದ ಮುಖಂಡರಿಗೆ ರಾಜಕೀಯ ಅಧಿಕಾರ ಸಿಗುವಂತೆ ತರಬೇತಿ ಹಾಗೂ ಅಗತ್ಯ ಸಹಕಾರ ನೀಡುವುದು ನನ್ನ ಪ್ರಮುಖ ಗುರಿಯಾಗಿದೆ,” ಎಂದು ಸ್ಪಷ್ಟಪಡಿಸಿದರು.
ಮುಂಬರುವ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವ ಸಮುದಾಯದ ಆಕಾಂಕ್ಷಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ವಿಶೇಷ ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ನಮ್ಮ ಮುಖಂಡರು ಟಿಕೆಟ್ ಪಡೆಯಲು ಹಾಗೂ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಶಕ್ತಿ ಕೇಂದ್ರವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸಮುದಾಯದ ನಾಯಕರಿಗೆ ಮತ್ತು ಮುಖಂಡರಿಗೆ ಶಿಸ್ತಿನ ಕರೆ ನೀಡಿದ ಅವರು, “ಯಾರೂ ಕರ್ನಾಟಕ ಶಕ್ತಿ ಕೇಂದ್ರದ ಬಗ್ಗೆ ತಪ್ಪು ಮಾಹಿತಿ ನೀಡಿ ನಮ್ಮ ಸಂಘಟಕರನ್ನು ವಿಚಲಿತರಾಗುವಂತೆ ಮಾಡಬಾರದು. ಶಕ್ತಿ ಕೇಂದ್ರ ಹಾಗೂ ನನ್ನ ಬಗ್ಗೆ ರಾಜ್ಯ ನಾಯಕರಿಗೆ ಮತ್ತು ಹೈಕಮಾಂಡ್ ಮುಂದೆ ಇಲ್ಲಸಲ್ಲದ ವಿಚಾರಗಳನ್ನು ತಿಳಿಸುವಂತಹ ಕೆಲಸಗಳಿಗೆ ಯಾರೂ ಕೈ ಹಾಕಬಾರದು,” ಎಂದು ಮನವಿ ಮಾಡಿದರು. ಸಭೆಯಲ್ಲಿ ಕರ್ನಾಟಕ ಶಕ್ತಿ ಕೇಂದ್ರದ ಕೇಂದ್ರ ಪದಾಧಿಕಾರಿಗಳಾದ ಪ್ರದಾನ ಕಾರ್ಯದರ್ಶಿ ಮಾ ನ ಗುರುದತ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಹಾಗೂ ಕರ್ನಾಟಕ ಶಕ್ತಿ ಕೇಂದ್ರದ ಖಜಾಂಚಿ ರಘು, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸವಿತಾ ಐಹೊಳೆ, ಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಕೆ ವಿ ಗೌತಮ್, ಶ್ಯಾಮ್ ನಟೇಕರ್, ರಾಜು ಕಡಿಯಾಳ್, ಎಲ್. ಲೋಕೇಶ್, ಶ್ರೀಮತಿ ಲಕ್ಷ್ಮೀ, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್ ಡಿ ಸಿ, ಜಿಬಿಎ ಅಧ್ಯಕ್ಷ ರ. ನರಸಿಂಹಮೂರ್ತಿ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಖಾದಿ ನರಸಿಂಹಮೂರ್ತಿ, ಲಕ್ಷ್ಮೀ, ಕರಗಯ್ಯ, ದೇವರಾಜ್ ಮತ್ತಿತರರು, ವಿವಿಧ ಜಿಲ್ಲೆಗಳ ಜಿಲ್ಲಾ ಸಂಚಾಲಕರು ಹಾಗೂ ವಲಯ ಉಸ್ತುವಾರಿಗಳು ಮತ್ತಿತರರು ಉಪಸ್ಥಿತರಿದ್ದರು.