ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ರಾಜ್ಯ ಸರ್ಕಾರದ ವಿವಿಧ ವೈಫಲ್ಯಗಳನ್ನು ವಿರೋಧಿಸಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹತ್ತು ದಿನಗಳ ಪಾದಯಾತ್ರೆಗೆ ಇಂದೇ ಕಡೆಯದಿನವಾಗಿದೆ. ಪಾದಯಾತ್ರೆಯ 9ನೇ ದಿನವಾದ ಇಂದು ಸಂಡೂರು ತಾಲೂಕಿನ ಕುಡುತಿನಿಯಿಂದ ಸಂಜೆ ವೇಳೆಗೆ ಬಳ್ಳಾರಿ ನಗರದ ವರೆಗೆ ನಡೆಯಲಿದೆ. ಇಂದು ಬೆಳಿಗ್ಗೆ ಕುಡತನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೈಕಲ್ ತುಳಿಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಸಂಜೆಯ ವೇಳೆಗೆ ಯಾತ್ರೆ ಬಳ್ಳಾರಿ ನಗರದ ವಾಲ್ಮೀಕಿ ವೃತ್ತ ತಲುಪಲಿದೆ.
ಇಂದಿನ ಯಾತ್ರೆಯಲ್ಲಿ ಬಿಜೆಪಿಯ ಬಹುತೇಕ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮಾಜಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೇರಿದಂತೆ ಅನೇಕ ಪ್ರಮುಖರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಳ್ಳಾರಿ ಭಾಗದ ಶಾಸಕರಾದ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಶಾಸಕ ಸುರೇಶ್‌ಕುಮಾರ್ ಹರೀಶ್‌ಪೂಂಜಾ, ಕಂಪ್ಲಿಯ ಸುರೇಶ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ. ಬಹುತೇಕ ತಾವು ಕೈಗೊಂಡಿದ್ದ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿರುವ ನಾಯಕರುಗಳು ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಅಕ್ರಮದ ಹಣ ರಾಜ್ಯ ಖಜಾನೆಗೆ ವಾಪಸ್ ಆಗುವವರೆಗೂ ತಮ್ಮ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.