ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಎಂ ಕೃಷ್ಣಪ್ಪ ತಮ್ಮ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ವಿಚಾರದಲ್ಲಿ ಬೇರೆ ಯಾವುದೇ ಚರ್ಚೆಗೆ ಆಸ್ಪದವಿಲ್ಲ. ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಅವರ ಮನವೊಲಿಸಲು ಬುಧವಾರ ಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಭೇಟಿ ನೀಡಿದ್ದರು. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.ಹರಿಪ್ರಸಾದ್ ಜೊತೆ ಮಾತನಾಡಿದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಪ್ಪ, ಸಚಿವ ಸ್ಥಾನ ಕೈತಪ್ಪಿದ ವಿಚಾರದಲ್ಲಿ ಬೇರೆ ಯಾವುದೇ ಚರ್ಚೆಗೆ ಆಸ್ಪದವಿಲ್ಲ. ನನಗೆ ಸಚಿವ ಸ್ಥಾನ ನೀಡಲೇಬೇಕು, ಕೂಡಲೇ ನೀಡಬೇಕು. ಅದನ್ನು ಬಿಟ್ಟು ಬೇರೆ ಯಾವ ಮಾತುಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಾಯಕರು ಮನೆಗೆ ಬಂದು ಹೋಗುತ್ತಿರುತ್ತಾರೆ, ಅವರೆಲ್ಲರೂ ನಮ್ಮ ಸ್ನೇಹಿತರು. ತಪ್ಪಿದೆ ಎನ್ನುವುದಕ್ಕಿಂತ ನನಗೆ ಸಚಿವ ಸ್ಥಾನ ನೀಡಬೇಕಿತ್ತು ಮತ್ತು ಅದನ್ನು ತಕ್ಷಣ ಕೊಡಬೇಕು ಅಷ್ಟೇ ಎಂದು ತಮ್ಮ ಖಡಕ್ ನಿಲುವನ್ನು ವ್ಯಕ್ತಪಡಿಸಿದ್ದಾರೆ.ಕೃಷ್ಣಪ್ಪ ಅವರೊಂದಿಗಿನ ಭೇಟಿಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿ.ಕೆ. ಹರಿಪ್ರಸಾದ್, ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ. ರೇಣುಕಾಚಾರ್ಯ ಕಾಲೇಜಿನ ದಿನಗಳಿಂದಲೂ ಅಂದರೆ ಸುಮಾರು 45 ರಿಂದ 50 ವರ್ಷಗಳಿಂದ ನಮ್ಮ ನಡುವೆ ಆತ್ಮೀಯ ಸಂಬAಧವಿದೆ. ಅವರು ಕಾಲೇಜಿನಲ್ಲಿ ನನಗಿಂತ ಸೀನಿಯರ್. ನಾವಿಬ್ಬರೂ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಿಗೆ ಕೆಲಸ ಮಾಡಿದವರು ಎಂದು ಮೆಲಕು ಹಾಕಿದರು.ಹಿರಿಯ ನಾಯಕರಿಗೆ ಸ್ಥಾನಮಾನ ಸಿಗದಿದ್ದಾಗ ಬೇಸರವಾಗುವುದು ಸಹಜ. ಅವರ ಬೆಂಬಲಿಗರಿಗೂ ನೋವಾಗಿದೆ. ಅವರಿಗೆ ಆಗಿರುವ ನೋವಿನ ಬಗ್ಗೆ ಈಗಾಗಲೇ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ಇನ್ನು ಕೆಲವು ದಿನಗಳಲ್ಲಿ ರಾಹುಲ್ ಗಾಂಧಿಯವರೇ ನೇರವಾಗಿ ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದರು.ಸಚಿವ ಸ್ಥಾನ ಸಿಗದಿದ್ದರೂ ಕೃಷ್ಣಪ್ಪ ಅವರು ಪಕ್ಷಕ್ಕೆ ಯಾವುದೇ ರೀತಿಯ ಧಕ್ಕೆ ಅಥವಾ ತೊಂದರೆಯಾಗದಂತೆ ನಡೆದುಕೊಂಡಿದ್ದಾರೆ, ಇದು ಬಹಳ ಸಂತೋಷದ ವಿಷಯ. ಅವರಿಗೆ ಯಾವ ಜವಾಬ್ದಾರಿ ಅಥವಾ ಸ್ಥಾನಮಾನ ನೀಡಬೇಕು ಎಂಬುದನ್ನು ರಾಹುಲ್ ಗಾಂಧಿ ನಿರ್ಧರಿಸಲಿದ್ದಾರೆ ಎಂದು ಹೇಳಿದರು.ರಾಜಕೀಯ ಎಂಬುದು ಸಾಧ್ಯತೆಗಳ ಆಟ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಹಾಗಾಗಿ ನಾವು ಯಾವಾಗಲೂ ಸಕಾರಾತ್ಮಕವಾಗಿ ಇರಬೇಕು, ಖಂಡಿತ ಒಳ್ಳೆಯದಾಗುತ್ತದೆ ಎಂದು ಹರಿಪ್ರಸಾದ್ ಭರವಸೆ ವ್ಯಕ್ತಪಡಿಸಿದರು.