ಕನಕಪುರ: ಪ್ರಕೃತಿ ಎಲ್ಲವನ್ನು ಕೊಟ್ಟಿದೆ, ಮನುಷ್ಯನ ದುರಾಸೆಯಿಂದ ಭ್ರಷ್ಟಾಚಾರ ಹುಟ್ಟಿಕೊಳ್ಳುತ್ತದೆ, ಬೇರು ಸಮೇತ ಕಿತ್ತು ಭ್ರಷ್ಟಾಚಾರ ಮುಕ್ತ ಸಮಾಜ ಮಾಡಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.ನಗರದ ರೂಟರಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಂದು ಇದ್ದು ನಾಳೆ ಹೋಗುವ ಈ ಜೀವನದಲ್ಲಿ ಬದುಕಿನ ಮರ್ಮವನ್ನು ಅರಿಯದೆ ದುರಾಸೆ ಸ್ವಾರ್ಥ ಮೋಹದ ಕಾರಣದಿಂದ ಭ್ರಷ್ಟಾಚಾರ ಹುಟ್ಟಿಕೊಳ್ಳುತ್ತದೆ, ಇಂದು ಯಾವ ಕ್ಷೇತ್ರವು ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಪ್ರತಿಯೊಂದು ಕ್ಷೇತ್ರವು ಕಲಬೆರಿಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂದಿನ ಕಾಲದಲ್ಲಿ ಯಾವ ಕಾನೂನು ಕಟ್ಟಲೆಗಳು ಇರ ಲಿಲ್ಲ ಯಾವುದೇ ತಪ್ಪು ಒಪ್ಪುಗಳು ನಡೆದರು ಅರಳಿಕಟ್ಟೆ ಪಂಚಾಯತಿಯಲ್ಲಿ ಕುಳಿತು ಎಲ್ಲವನ್ನ ಪರಿಹರಿಸುತ್ತಿದ್ದರು ಈಗ ಎಲ್ಲವೂ ಬದಲಾಗಿದೆ ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಕಲುಷಿತವಾಗುತ್ತಿದೆ, ಲಂಚ, ಭ್ರಷ್ಟಾಚಾರ ಎನ್ನುತ್ತಿವೆಯೋ ಅದರ ಮೂಲವೆ ನಾವು, ನಮ್ಮ ಕೆಲಸ ಸಾಧನೆಗೆ ನಾವೇ ಲಂಚ ಕೊಡುತ್ತೇವೆ, ವರದಕ್ಷಿಣೆಯನ್ನು ಪಡೆಯುತ್ತೇವೆ, ಭ್ರಷ್ಟತೆ ನಮ್ಮಲ್ಲಿಯೇ ಹುಟ್ಟಿಕೊಳ್ಳುತ್ತದೆ ಎಂದು ತಿಳಿಸಿದರು. ಇಂದು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಿದೆ ಆದರೆ ಬೆಕ್ಕಿಗೆ ಗಂಟೆ ಕಟ್ಟು ವವರು ಯಾರು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತಿದೆ, ಭ್ರಷ್ಟಾಚಾರ ನಿರ್ಮೂಲನೆಗಾಗಿ 2012 ರಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಚರನೆ ಸಮಿತಿ ಜನ್ಮ ತಾಳಿದೆ, ಕಾಯಿಲೆಗೆ ಯಾವ ರೀತಿ ಮದ್ದು ಕೊಡುತ್ತೇವೆ ಅದೇ ರೀತಿ ಭ್ರಷ್ಟಾಚಾರ ರೋಗಕ್ಕೂ ಮದ್ದು ಕೊಡಬೇಕಿದೆ. ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಯವರು ರಾಷ್ಟç ವ್ಯಾಪ್ತಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿ ಭ್ರಷ್ಟಾಚಾರ ವಿರುದ್ಧದ ಹೋರಾಟ ನಡೆಸುತ್ತಿದ್ದಾರೆ, ಇದು ಸಂಘಟಿತ ಹೋರಾಟವಾಗಬೇಕು, ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಜಾತಿ, ಧರ್ಮ, ಸಂಬಂಧ ಇರಬಾರದು, ಯಾವುದೇ ಆಮಿಷಗಳಿಗೆ, ಬೆದರಿಕೆಗೆ ಒಳಗಾಗದೆ, ಪ್ರಾಮಾಣಿಕತೆ ಯಿಂದ ಹೋರಾಡಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಲಿಂಗೇಗೌಡ ಮಾತನಾಡಿ ಭ್ರಷ್ಟಾಚಾರನಿರ್ಮೂಲನೆಗೆ ಬೇಕಿರುವುದು ನೈತಿಕತೆ, ಭ್ರಷ್ಟಾಚಾರ ನಿರ್ಮೂಲನೆ ಕೇವಲ ಸರ್ಕಾರಕ್ಕೆ ಸೇರಿದಲ್ಲ, ಈ ನಾಡಿನ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ, ಮುಂದಿನ ಪೀಳಿಗೆಗೆ ಉತ್ತಮ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕೊಡಬೇಕಾದರೆ, ಸಮಾಜದ ಸ್ವಾಸ್ಥ÷್ಯ ಕಾಪಾಡಬೇಕಾದರೆ ಇಂದು ನಾವು ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸ ಬೇಕಿದೆ, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಸಮಿತಿಯ ರಾಜ್ಯಾಧ್ಯಕ್ಷ ಗುರುಸ್ವಾಮಿ ಮಾತನಾಡಿ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಡಬೇಕೆಂದರೆ ಮೊದಲು ನಾವು ಶುದ್ಧಹಸ್ಥರಾಗಬೇಕು,ನಮ್ಮ ಹೋರಾಟಕ್ಕೆ ಕೈಜೋಡಿಸುವವರು ರಾಜಕೀಯದಿಂದ ದೂರ ಇರಬೇಕು, ಯಾವುದೇ ಕಾರಣಕ್ಕೂ ಸಮಿತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮೊದಲು ನಾವು ಸಂಪೂರ್ಣವಾಗಿ ಅದರ ಬಗ್ಗೆ ತಿಳಿದುಕೊಳ್ಳಬೇಕು, ಬ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಸಂಘಟಿತ ಹೋರಾಟ ನಡೆಸಬಾರದು, ಯಾವುದೇ ಹೋರಾಟವು ದ್ವೇಷದಿಂದ ಕೂಡಿರಬಾರದು ನೈಜತೆಯಿಂದ ಹೋರಾಡಬೇಕು ಎಂದು ಕಿವಿಮಾತು ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲಾ ರಾಮನಗರ ಅಧ್ಯಕ್ಷ ನಾರಾಯಣ್ ಮಾತನಾಡಿ ಜಿಲ್ಲೆಯಲ್ಲಿ ಇಂದು ಅಧಿಕೃತವಾಗಿ ಸಮಿತಿ ಚಾಲನೆಗೊಂಡಿದೆ, ಸಮಾಜದಲ್ಲಿ ನಡೆಯುವ ಯಾವುದೇ ಅನ್ಯಾಯ, ದೌರ್ಜನ್ಯ, ಅಕ್ರಮ, ಭ್ರಷ್ಟಾಚಾರದ ವಿರುದ್ಧ ಸಮಿತಿ ಹೋರಾಟ ನಡೆಸಲಿದೆ, ಎಲ್ಲಿಯೆ ಭ್ರಷ್ಟಾಚಾರ ನಡೆದರೂ ಅಲ್ಲಿ ನಮ್ಮ ಸಮಿತಿ ಅದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಕನಕಪುರ ಸಮಿತಿಯ ಸದಸ್ಯ ವಕೀಲ ಜೈರಾಮೇಗೌಡ ಮಾತನಾಡಿ ಕನಕಪುರದಲ್ಲಿ ಬಡವರಿಗೆ ವಿತರಣೆ ಮಾಡಬೇಕಿದ್ದ ಆಹಾರ ಪಡಿತರವನ್ನು ಕಾಳ ಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಟಿಎಟಿಸಿಎಂಎಸ್ ನಲ್ಲಿ ಅಕ್ರಮ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದ ದಾಸ್ತನನ್ನು ತಡೆದು ಆಹಾರ ಇಲಾಖೆಗೆ ಹೋರಾಟಗಾರರು ನೀಡಿದಾಗ, ಸಂಸ್ಥೆಯವರು ಅದು ಅಕ್ರಮವಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ, ಇಲಾಖೆಯವರು ಅದರ ವಿರುದ್ಧ ಇಲ್ಲಿಯವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.ಅದಾದ ನಂತರ ಮತ್ತೆ ಅಕ್ರಮ ಸಾಗಾಣಿಕೆ ಆಗುತ್ತಿದ್ದ ಆಹಾರ ಪಡಿತರ ತಡೆದು ಆಹಾರ ಇಲಾಖೆಗೆ ನೀಡಲಾಗಿದೆ, ಆದರೂ ಇಲಾಖೆಯವರು ಕನಕಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ದಂದೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಇಲ್ಲಿ ನಡೆಯುತ್ತಿರುವ ಅಕ್ರಮದಲ್ಲಿ ಇಲಾಖೆಯವರೇ ಭಾಗಿಯಾಗಿದ್ದಾರೆ, ಅದಕ್ಕಾಗಿ ಇಲ್ಲಿ ಸಮಿತಿಯವರು ಹೋರಾಟ ಮಾಡಬೇಕೆಂದು ಮನವಿ ಮಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದಯಾನಂದ, ರಾಜ್ಯ ಕಾರ್ಯಧ್ಯಕ್ಷ ಡಾ.ಎಚ್.ಬಿ.ಎಂ ಹಿರೇಮಠ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಹುಚ್ಚಪ್ಪ, ರಾಜ್ಯ ಉಪಾಧ್ಯಕ್ಷ ಟಿ.ಡಿ.ಹೊಂಬಾಳೆಗೌಡ, ರಾಜ್ಯ ಕಾರ್ಯದರ್ಶಿ ಶಿವಮಾದು, ಪ್ರಧಾನ ಕಾರ್ಯದರ್ಶಿ ರಾಜು.ಸಿ, ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಗಬ್ಬಾಡಿ ಕಾಳೇಗೌಡ, ಚಿಕ್ಕೆಂಪೇಗೌಡ, ತಾಲೂಕು ಘಟಕದ ಪದಾಧಿಕಾರಿಗಳಾದ ಗಂಗಾಧರಯ್ಯ ಸಿ, ರಮೇಶ್.ಎಂ.ವಿ, ಚಿಕ್ಕರಂಗಯ್ಯ, ನಾರಾಯಣ.ಟಿ, ರಾಮಚಂದ್ರೇಗೌಡ, ಮುನಿ ಶಿವಣ್ಣೇಗೌಡ, ಓಂಕಾರೇಶ್ವರ.ಟಿ.ಎಚ್,ರಾಮಯ್ಯ.ಟಿ.ಎಂ, ಮಹೇಶಯ್ಯ ಕೆ.ಆರ್, ಕೂಗಿ ಗಿರಿಯಪ್ಪ, ಬಿ.ಎಂ. ಚೆಲುವೇಗೌಡ, ರಾಜಪ್ಪ ಸೇರಿದಂತೆ ಸಮಿತಿಯ ಸದಸ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.