ಬೆಂಗಳೂರು: ಬೆಳಗಾವಿ ವಿಭಾಗದಲ್ಲಿ ಸಾಹುಕಾರ್ ಎಂದೇ ಕರೆಯಲಾಗುವಾಗ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಇ.ಡಿ. ಬಿಸಿ ತಟ್ಟಿದೆ.
ಇಂದು ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಡಾರ‍್ಸ್ ಕಾಲೋನಿಯ ಸಚಿವರ ನಿವಾಸ ಸೇರಿದಂತೆ ಬೆಳಗಾವಿ ಗೋವಾ ಹಾಗೂ ಗೋಕಾಕ್‌ನ 18 ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಸತೀಶ್ ಅವರ ಡಾರ‍್ಸ್ ಕಾಲೋನಿಯ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಸತೀಶ್ ಅವರು ಮನೆಯಲ್ಲೇ ಇದ್ದರು. ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜತೆ ಜತೆಯಲ್ಲಿಯೇ ಬೆಳಗಾವಿಯಲ್ಲಿ ಸತೀಶ್ ಅವರ ಆಪ್ತ ಎನ್ನಲಾದ ಡಾ.ಗಿರೀಶ್ ಸೋನಾವಾಲೆ ಅವರ ಮನೆ ಮೇಲೂ ದಾಳಿ ನಡೆದಿದೆ. ಇದರ ನಡುವೆಯೂ ಸತೀಶ್ ಅವರ ಪುತ್ರಿ ಸಂಸದೆಯಾಗಿರುವ ಪ್ರಿಯಾಂಕ ಮತ್ತು ಪುತ್ರ ರಾಹುಲ್ ಭಾವಮೈದಾ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿ ಮಂಜುನಾಥ್ ಅವರಿಗೆ ಸೇರಿದ ಸ್ಥಳಗಳಲ್ಲಿಯೂ ದಾಳಿ ನಡೆಸಲಾಗಿದೆ. ಗೋವಾದಲ್ಲಿ ಸತೀಶ್ ಅವರಿಗೆ ಸೇರಿದ ಆಸ್ತಿ ಇದೆ ಎನ್ನಲಾಗಿದ್ದು, ಅಲ್ಲಿಯೂ ಸಹ ದಾಳಿ ನಡೆದಿದೆ. ಗೋಕಾಕ್‌ನಲ್ಲಿ ಸಚಿವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಅವರ ಆಪ್ತರು ಎನ್ನಲಾದ ರಾಜುದರಗ ಶೆಟ್ಟಿ, ಪರಸಣ್ಣನವರ್ ಅವರುಗಳ ಮೇಲೂ ಸಹ ದಾಳಿ ನಡೆದಿದ್ದು, ಒಟ್ಟು 18 ಕಡೆ ಭೇಟಿ ನೀಡಿರುವ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ವಿದೇಶಿ ವಿನಿಮಯ ಕಾಯ್ದೆಯಡಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ದಕ್ಷಿಣ ಆಪ್ರಿಕಾ ಉಗಾಂಡದಲ್ಲಿ ಅಕ್ರಮವಾಗಿ ಸಚಿವರು ಹಣ ಹೂಡಿಕೆ ಮಾಡಿದಾರೆ ಎಂಬ ಆರೋಪ ಮಾಡಿದೆ. ಪ್ರಿಂಟರ್ ಮತ್ತು ಇತರೆ ವಸ್ತುಗಳೊಂದಿಗೆ ಆಗಮಿಸಿರುವ ಇ.ಡಿ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಕಳೆದ 2 ತಿಂಗಳ ಹಿಂದೆ ಇ.ಡಿ. ಅಧಿಕಾರಿಗಳು, ಸತೀಶ್ ಅವರ ಭಾವಮೈದಾ ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ್ ಅವರ ದಾಳಿ ನಡೆಸದ ದಾಳಿಗೆ ಯಾವುದ ಸಂಬAಧವಿಲ್ಲ. ಆ ಪ್ರಕರಣವೇ ಬೇರೆ. ಈ ಪ್ರಕರಣವೇ ಬೇರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ ಎಂದು ಹೇಳಲಾಗತ್ತದೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಈ ದಾಳಿ ರಾಕೀಯ ಪ್ರೇರಿತವಾಗಿದ್ದು, ಈ ರೀತಿ ನಡೆಯುತ್ತದೆ ಎಂದು ತಿಳಿದಿತ್ತು ಎಂದಿದ್ದಾರೆ. ಮುಂದೆಯೂ ಈ ದಾಳಿ ಇನ್ನಷ್ಟು ನಡೆಯಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದು, ಹರಿಪ್ರಸಾದ್ ಅವರು ಮಾತನಾಡಿ, ಸಚಿವರ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್, ಹಾಗೂ ಲಖನ್ ಅವರ ಮೇಳೆ ದಾಳಿ ನಡೆದಿಲ್ಲ. ಏಕೆಂದರೆ ಅವರು ಬಿಜೆಪಿಯಲ್ಲಿದ್ದಾರೆ ಎಂದು ದೂರಿದ್ದಾರೆ.