ಬೆಂಗಳೂರು: ಕಳೆದ 15ರ ರಾತ್ರಿ ಚಾಮರಾಜನಗರದ ಹನೂರು ಅರಣ್ಯ ಪ್ರದೇಶದ ಶಾಗ್ಯ ಬಳಿ ನಡೆದಿರುವ ಮೂವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಈ ಆದೇಶ ಹೊರಿಡಿದ್ದಾರೆ. ಸಿಐಡಿ ವಿಭಾಗದ ವಿಶೇಷ ತನಿಖಾ ದಳದಿಂದ ಪ್ರಕರಣವನ್ನು ತನಿಖೆ ನಡೆಸಲು ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ವಿಭಾಗದ ಅಧಿಕಾರಿಗಳು ಮೂವರನ್ನು ಕಾಡು ಪ್ರಾಣಿಗಳ ಕಳ್ಳಬೇಟೆಗಾರರು ಎಂದು ಆರೋಪಿಸಿ ಗುಂಡಿಟ್ಟು ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ವಿವಾದ ಏರ್ಪಟ್ಟು ಕಾಡು ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ವಿಧಾನಸಭೆಯಲ್ಲೂ ಈ ಪ್ರಕರಣ ಪ್ರತಿಧ್ವನಿಸಿ ವಿರೋಧಪಕ್ಷಗಳು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿ ಮೂವರು ರೈತರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹ ಪಡಿಸಲಾಗಿತ್ತು. ಘಟನೆ ಸಂಬAಧ ನಾಲ್ಕು ಎಫ್‌ಐಆರ್ ದಾಖಲಾಗಿತ್ತು. ಇದೀಗ ನಾಲ್ಕು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಬೇಕೆಂದು ಆದೇಶ ಹೊರಡಿಸಲಾಗಿದೆ.
ಹನೂರು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ರಾಮಪುರದಲ್ಲಿ 1 ಹಾಗೂ ಕೊಳ್ಳೆಗಾಲ ಗ್ರಾಮಾಂತರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಆಂಥೋನಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂಬುವರು ಮೃತಪಟ್ಟಿದ್ದು, ಈ ಘಟನೆಯೂ ತಮಿಳುನಾಡಿನ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು.