ಬಾಗೇಪಲ್ಲಿ (ಭಾಗ್ಯನಗರ) ಮೇ 7: ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಈಜುಕೊಳಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರ ಜೀವ ಭದ್ರತೆ ಪ್ರಶ್ನಾರ್ಥಕವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಗ್ರಾಮ ಪಂಚಾಯ್ತಿಗಳಿಂದ ಅಗತ್ಯ ಪರವಾನಗಿ ಪಡೆಯದೇ, ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸದೇ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅನೇಕ ಈಜುಕೊಳಗಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಖಾಸಗಿ ಲೇಔಟ್ಗಳು, ರೆಸಾರ್ಟ್ಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿರುವ ಈಜುಕೊಳಗಳಿಗೆ ಪ್ರತಿದಿನ ನೂರಾರು ಜನರು, ಮಕ್ಕಳು ಹಾಗೂ ಮಹಿಳೆಯರು ಭೇಟಿ ನೀಡುತ್ತಿದ್ದು, ಯಾವುದೇ ಕ್ಷಣದಲ್ಲಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಗಂಟೆಗೆ ನೂರಾರು ರೂಪಾಯಿಗಳನ್ನು ವಸೂಲಿ ಮಾಡುವ ಇವರು ಸರ್ಕಾರದಿಂದ ನಿಗದಿಪಡಿಸಲಾದ ಸುರಕ್ಷತಾ ಕ್ರಮಗಳು, ನೀರಿನ ಗುಣಮಟ್ಟ ಪರಿಶೀಲನೆ, ತರಬೇತಿ ಪಡೆದ ಲೈಫ್ಗಾರ್ಡ್ ನೇಮಕ, ಪ್ರಥಮ ಚಿಕಿತ್ಸೆ ವ್ಯವಸ್ಥೆ, ಮಕ್ಕಳ ಸುರಕ್ಷತೆ ಸೇರಿದಂತೆ ಹಲವು ಕಡ್ಡಾಯ ನಿಯಮಗಳನ್ನು ಪಾಲಿಸದೇ ಈಜುಕೊಳಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ. ಕೆಲ ಕಡೆಗಳಲ್ಲಿ ಮೂಲಭೂತ ಸುರಕ್ಷತಾ ವ್ಯವಸ್ಥೆಯೇ ಇಲ್ಲದೆ ಸಾರ್ವಜನಿಕರನ್ನು ಆಕರ್ಷಿಸಲು ಈಜುಕೊಳಗಳನ್ನು ತೆರೆಯಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ವಿಶೇಷವಾಗಿ ಈಜು ತರಬೇತಿ ನೀಡಲು ಸೂಕ್ತ ಅರ್ಹತೆ ಮತ್ತು ಅನುಭವ ಹೊಂದಿದ ತರಬೇತುದಾರರಿಲ್ಲದೇ ಮಕ್ಕಳಿಗೆ ಹಾಗೂ ಯುವಕರಿಗೆ ಈಜು ಕಲಿಸಲಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈಜು ಬಾರದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೊಳಗಳಿಗೆ ಇಳಿಯುತ್ತಿರುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಈ ಅನಧಿಕೃತ ಈಜುಕೊಳಗಳ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ನಿರ್ಲಕ್ಷ÷್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವರ್ಷಗಳಿಂದ ನಿಯಮ ಉಲ್ಲಂಘಿಸಿ ನಡೆಯುತ್ತಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಅಸಮಾದಾನಕ್ಕೆ ಕಾರಣವಾಗಿದೆ.
ಪರವಾನಗಿ ಇಲ್ಲದೇ ನಡೆಯುತ್ತಿರುವ ಈಜುಕೊಳಗಳಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದ್ದು, ತೆರಿಗೆ ಹಾಗೂ ಶುಲ್ಕ ವಸೂಲಾತಿ ತಪ್ಪುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಲವು ಈಜುಕೊಳಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯೂ ನಡೆಯದೆ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ.
ಸಾವು ನೋವು ಸಂಭವಿಸಿದರೆ ಅದರ ಹೊಣೆ ಯಾರು ಹೊರುತ್ತಾರೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಅಧಿಕಾರಿಗಳು ಅಪಘಾತ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಅನಧಿಕೃತ ಈಜುಕೊಳಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಯಾವುದೇ ಈಜುಕೊಳದವರೂ ಸಹ ಪರವಾನಗಿ ಪಡೆದಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ.’’ ಎಂದು ದೇವರಗುಡಿಪಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಂಕರಪ್ಪ
ತಿಳಿಸಿದ್ದಾರೆ.
ಪರವಾನಗಿ ಇಲ್ಲದೇ ಅನಧಿಕೃತ ಈಜುಕೊಳಗಳ ಹಾವಳಿ: ಅಪಾಯದ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ



