ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅಪ್ಪು ಬೆಳ್ಳಿ ಟ್ರೋಫಿ ಅನಾವರಣಓರಾಯನ್ ಮಾಲ್ ನ ಹೊರಾಂಗಣದಲ್ಲಿ ತಣ್ಣನೆ ಬೀಸುತ್ತಿದ್ದ ಗಾಳಿ. ಪಕ್ಕದಲ್ಲೊಂದು ಕೆರೆ. ಆ ಸುಂದರ ಪರಿಸರದಲ್ಲೊಂದು ವರ್ಣರಂಜಿತ ವೇದಿಕೆ. ಆ ವೇದಿಕೆಯಲ್ಲಿ ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ” ಅಪ್ಪು ಕಪ್ ಸೀಸನ್ 2″(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಅಪ್ಪು ಸಂಭ್ರಮ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರು ನಿರ್ಮಿಸಿರುವ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅನಾವರಣವಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಾ.ರಾ.ಗೋವಿಂದು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶೆಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ‘ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಅದು ಹೊರದೇಶದಲ್ಲಿ ಅದನ್ನು ನಡೆಸಬೇಕೆಂಬುದು ಅವರ ಯೋಚನೆಯಾಗಿತ್ತು. ಸದಾ ಒಬ್ಬರಿಗೆ ಒಳೆಯದನ್ನೇ ಬಯಸುವ ಹೃದಯ ಅವರಿಗಿತ್ತು. ಅಂತಹ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಡೆಯುತ್ತಿರುವ “ಅಪ್ಪು ಕಪ್ ಸೀಸನ್ 2” ಯಶಸ್ವಿಯಾಗಲಿ’ ಎಂದು ಶ್ರೀಮುರಳಿ ಹಾರೈಸಿದರು.
‘ನಾಡು ಕಂಡ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ “ಅಪ್ಪು ಕಪ್” ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯ ಬಗ್ಗೆ ಚೇತನ್ ಸೂರ್ಯ ಅವರು ಹೇಳಿದಾಗ ಬಹಳ ಸಂತೋಷವಾಯಿತು. ನಾನು ಮೊದಲೇ ತಿಳಿಸಿದಂತೆ ಈ ಟೂರ್ನಿಯ ಮೊದಲ ವಿಜೇತರಿಗೆ ನೂರು ಗ್ರಾಮ್ ಬಂಗಾರ, ದ್ವಿತೀಯ ವಿಜೇತರಿಗೆ ಐವತ್ತು ಗ್ರಾಮ್ ಬಂಗಾರ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಬಂಗಾರವನ್ನು ಬಹುಮಾನ ನೀಡುವುದಾಗಿ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ತಿಳಿಸಿದರು.
ನಾವು ಕಳೆದ ವರ್ಷದಿಂದ ಆಯೋಜಿಸುತ್ತಿರುವ “ಅಪ್ಪು ಕಪ್” ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ. ಶ್ರೀಮುರಳಿ ಅವರು ಹೇಳಿದಂತೆ ಮುಂದಿನ ವರ್ಷ ಹೊರದೇಶದಲ್ಲಿ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಆಯೋಜಿಸಲು ಪ್ರಯತ್ನ ಪಡುತ್ತೇನೆ. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿದೆ. ಹತ್ತು ತಂಡಗಳ ಮಾಲೀಕರಿಗೆ, ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರಿಗೆ ಹಾಗೂ ಎಲ್ಲಾ ತಂಡಗಳ ಮಾಲೀಕರಿಗೆ, ಆಟಗಾರರಿಗೆ ಧನ್ಯವಾದ ತಿಳಿಸಿದ “ಅಪ್ಪು ಕಪ್” ನ ರುವಾರಿ ಚೇತನ್ ಸೂರ್ಯ, ಜುಲೈ 26, 27, 28 ಬೆಂಗಳೂರಿನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.