ಕೆ.ಆರ್.ನಗರ: ಇಂದು ವಿಶ್ವ ವೇಗವಾಗಿ ಬೆಳೆಯುತ್ತಿದ್ದು ಒಂದೆಡೆ ಶ್ರೀಮಂತರ ಬೆಳವಣಿಗೆ ಇನ್ನೊಂದೆಡೆ ರೈತರ ಸಮಸ್ಯೆ ಕಾಣುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹೆಬ್ಬಾಳು ಹೋಬಳಿ ಮಾರಗೌಡನಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಮಾಜಿ ಸದಸ್ಯ ಬಂಡಹಳ್ಳಿಕುಚೇಲ ನೂತನವಾಗಿ ನಿರ್ಮಿಸಿರುವ ಶ್ರೀವೀರಭದ್ರೇಶ್ವರ ಫ್ಯೂಯಲ್ಸ್ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಪ್ರಧಾನಿ ನರೇಂದ್ರಮೋದಿ ನನಗೆ ಅವರ ಸಂಪುಟದಲ್ಲಿ ಕೇಂದ್ರ ಸಚಿವ ಸ್ಥಾನ ನೀಡಿ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇದರಿಂದಾಗಿ ಇಡೀ ದೇಶವವನ್ನೇ ನಾನು ಸುತ್ತಬೇಕಾಗಿದೆ. ಆದ್ದರಿಂದ ನನ್ನ ಲೋಕಸಭಾ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಲು ಆಗುತ್ತಿಲ್ಲ ಎಂದರು.ಒಂದು ಕಾಲದಲ್ಲಿ ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದವು. ಪ್ರಸಕ್ತ ನಮ್ಮ ದೇಶ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ರೈತರ ಕಷ್ಟಕ್ಕೆ ಬೆಲೆ ಇಲ್ಲದಂತಾಗುತ್ತಿರುವುದು ದುರಂತವೇ ಸರಿ. ನಮ್ಮ ಭಾಗದಲ್ಲಿ ತಂಬಾಕು ಬೆಳೆಗಾರರಿಗೆ ಒಮ್ಮೆ ಉತ್ತಮ ಬೆಲೆ ಸಿಕ್ಕರೆ, ಇನ್ನೊಮ್ಮೆ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಸಮಸ್ಯೆಗಳು ಎದುರಾಗಿದ್ದು ರೈತರು ನಷ್ಟದ ಸಮಸ್ಯೆ ಬಗೆಹರಿಸಲು ನಾನು ಕೇಂದ್ರ ಸಚಿವರು ಹಾಗೂ ಐಟಿಸಿ ಕಂಪನಿಯರೊAದಿಗೆ ಚರ್ಚಿಸಿದ್ದು, ಈಗಿರುವ ಆದೇಶವನ್ನು ಪರಿಸ್ಕರಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಿಪಡಿಸಿ ಕೂಡಲೇ ಆದೇಶ ಹೊರಡಿಸಬೇಕೆಂದು ಕೋರಿದ್ದೇನೆ ಎಂದು ತಿಳಿಸಿದರು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ರೈತರಿಗೆ ಉಳಿಗಾಲವಿಲ್ಲ. ಬಹಳ ಕಷ್ಟಪಟ್ಟು ಬೆಳೆದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ವತಿಯಿಂದ ಸಬ್ಸಿಡಿ ಹಾಗೂ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ರಾಜ್ಯ ಸರ್ಕಾರದಿಂದ ಭತ್ತ, ರಾಗಿ ಹಾಗೂ ಇತರೆ ಬೆಳೆಗಳಿಗೆ ಯಾವುದೇ ಬೆಂಬಲವಿಲ್ಲ. ಸೂಕ್ತ ಬೆಲೆ ಇಲ್ಲದೆ ರೈತರು ಸಮಸ್ಯೆಗೀಡಾಗಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.ನಾನು ನೊಂದ ಕುಟುಂಬಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವಾನ ಹೇಳುತ್ತಿದ್ದೇನೆ. ಜನರ ಮತ ಪಡೆದ ಭಯವಿಲ್ಲದ ಸರ್ಕಾರ ಬಡವರ ಪರವಾಗಿರಲು ಸಾಧ್ಯವಿಲ್ಲ. ನಿಮ್ಮ ಪರವಾಗಿ ರೈತರ ದ್ವನಿಯಾಗಿ ನಾನು ಕೇಂದ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ಕುಮಾರ್, ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಹೆಚ್.ಸಿ.ಕುಮಾರ್, ರಾಜಣ್ಣ, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್, ಮಾಜಿ ಎಪಿಎಂಸಿ ಸದಸ್ಯ ಬಂಡಹಳ್ಳಿಕುಚೇಲ, ಚನ್ನಂಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಹಾಜರಿದ್ದರು.
ರೈತರ ಕಷ್ಟಕ್ಕೆ ಬೆಲೆ ಇಲ್ಲದಂತಾಗುತ್ತಿರುವುದು ದುರಂತವೇ ಸರಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ



