ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ದಾಖಲಿಸಿದ 6 ವಿಕೆಟ್ಗಳ ಭರ್ಜರಿ ಗೆಲುವು, ಇಡೀ ಟೂರ್ನಿಯ ಸಮೀಕರಣವನ್ನೇ ಬದಲಾಯಿಸಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ (105*) ನೆರವಿನಿಂದ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಆರ್ಸಿಬಿಯ ಈ ವಿಜಯೋತ್ಸವವು ಟೂರ್ನಿಯ ಇತರ 5 ಪ್ರಮುಖ ತಂಡಗಳನ್ನು ಭಾರೀ ಸಂಕಷ್ಟಕ್ಕೆ ತಳ್ಳಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಆರ್ಸಿಬಿ ವಿರುದ್ಧದ ಸೋಲಿನಿಂದ ಕೆಕೆಆರ್ ತಂಡಕ್ಕೆ ಅತ್ಯಂತ ದೊಡ್ಡ ಆಘಾತ ಎದುರಾಗಿದೆ. 11 ಪಂದ್ಯಗಳನ್ನು ಆಡಿರುವ ಕೆಕೆಆರ್ ಕೇವಲ 4 ಗೆಲುವಿನೊಂದಿಗೆ 9 ಪಾಯಿಂಟ್ಸ್ ಪಡೆದು 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಕೆಕೆಆರ್ ತಂಡದ ನೆಟ್ ರನ್ ರೇಟ್ ಪ್ರಸ್ತುತ -0.198 ರಷ್ಟಿದ್ದು, ಇದು ಅತ್ಯಂತ ಕಳಪೆಯಾಗಿದೆ. ಹೀಗಾಗಿ ಕೆಕೆಆರ್ ಮುಂದಿನ ಪಂದ್ಯಗಳನ್ನು ಗೆದ್ದರೂ ಅಧಿಕೃತವಾಗಿ ಪ್ಲೇಆಫ್ ತಲುಪಬೇಕಾದರೆ ಸಿಎಸ್ಕೆ, ರಾಜಸ್ಥಾನ್ ರಾಜಸ್ಥಾನ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ 16 ಅಂಕಗಳನ್ನು ಪಡೆದಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಮತ್ತಷ್ಟು ಕಠಿಣವಾಗಿದೆ. ಈವರೆಗೆ ಕೇವಲ 10 ಅಂಕಗಳನ್ನು ಮಾತ್ರ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೂ, ಎಸ್ ಆರ್ ಹೆಚ್, ಪಂಜಾಬ್ ಕಿಂಗ್ಸ್, ಸಿಎಸ್ ಕೆ ಹಾಗೂ ಆರ್ ಆರ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋಲುವುದು ಡಿಸಿ ಪಾಲಿಗೆ ಅನಿವಾರ್ಯವಾಗಿದೆ.
ಮೊದಲ ಕ್ವಾಲಿಫೈಯರ್: ಐಪಿಎಲ್ ನಿಯಮಾವಳಿಗಳ ಪ್ರಕಾರ ಅಂಕಪಟ್ಟಿಯ ಮೊದಲ ಎರಡು ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು ‘ಕ್ವಾಲಿಫೈಯರ್ 1’ ರೂಪದಲ್ಲಿ ಎರಡು ಅವಕಾಶಗಳು ಸಿಗುತ್ತವೆ. ಪ್ರಸ್ತುತ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಲಾ 16 ಅಂಕಗಳೊAದಿಗೆ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ.
ಮಧ್ಯಮ ಕ್ರಮಾಂಕದ ತಂಡಗಳ ಆತಂಕ: ಪ್ರಸ್ತುತ 3, 4, 5 ಮತ್ತು 6ನೇ ಸ್ಥಾನಗಳಲ್ಲಿರುವ ಸನ್ರೈಸರ್ಸ್ ಹೈದರಾಬಾದ್ (14 ಅಂಕ), ಪಂಜಾಬ್ ಕಿಂಗ್ಸ್ (13 ಅಂಕ), ಚೆನ್ನೈ ಸೂಪರ್ ಕಿಂಗ್ಸ್ (12 ಅಂಕ) ಮತ್ತು ರಾಜಸ್ಥಾನ್ ರಾಯಲ್ಸ್ (12 ಅಂಕ) ತಂಡಗಳಿಗೆ ಈಗ ಟಾಪ್-2 ತಲುಪುವ ಹಾದಿ ದುರ್ಗಮವಾಗಿದೆ. ಏಕೆಂದರೆ ಇನ್ನುಳಿದ ಪಂದ್ಯಗಳಲ್ಲಿ ಈ ತಂಡಗಳು ಕೇವಲ ಗೆಲ್ಲುವುದಷ್ಟೇ ಅಲ್ಲದೆ, ದೊಡ್ಡ ಅಂತರದಿAದ ಜಯಭೇರಿ ಬಾರಿಸಬೇಕಿದೆ. ಏಕೆಂದರೆ ಆರ್ ಸಿಬಿ ಮತ್ತು ಜಿಟಿ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮೊದಲ ಕ್ವಾಲಿಫೈಯರ್ ಆಡುವುದು ಖಚಿತ. ಹೀಗಾಗಿ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಆರ್ ಸಿಬಿ ಸೋಲುವುದನ್ನು ಪಂಜಾಬ್ ಕಿಂಗ್ಸ್, ಸಿಎಸ್ ಕೆ, ಎಸ್ ಆರ್ ಹೆಚ್ ಮತ್ತು ಆರ್ ಆರ್ ತಂಡಗಳು ಎದುರು ನೋಡಬೇಕು.
ಆರ್.ಸಿ.ಬಿ ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!



