ಬೆಂಗಳೂರು: ರಾಮನವಮಿ ನಿಮಿತ್ತ ಧ್ವಜ ಹಿಡಿದು ಜೈ ಶ್ರೀರಾಮ್ ಅಂತಾ ಕೂಗುತ್ತಾ ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ತಡೆದು ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ ಎಂದಿರುವ ಆರೋಪಿಗಳು ಜೊತೆಗೆ ಯಾವುದೇ ಪ್ರೀ ಫ್ಲಾನ್ ಕೂಡ ಇರಲಿಲ್ಲ, ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ಕು ಜನರು ಎರಡು ಬೈಕ್ಗಳಲ್ಲಿ ಬರ್ತಾ ಇದ್ವಿ ಎಂದು ಹೇಳಿದ್ದಾರೆ.
ನಾವು ಬೈಕ್ನಲ್ಲಿ ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಯ್ತು’ ಎಂದಿರುವ ಆರೋಪಿಗಳು ಈ ವೇಳೆ ಕಾರಿನಲ್ಲಿ ಮೂರು ನಾಲ್ಕು ಯುವಕರು ಬಂದು ನಮ್ಮ ಬೈಕ್ ಪಕ್ಕ ನಿಲ್ಲಿಸಿದ್ರು. ಈ ವೇಳೆ ಕಾರ್ನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತ ಜೋರಾಗಿ ಕಿರುಚಿದ್ರು. ಜೊತೆಗೆ ನಮಗೂ ಜೈ ಶ್ರೀರಾಮ್ ಅಂತ ಕೂಗಿ ಅಂದ್ರು. ಅದಕ್ಕೆ ನಾವು ನೀವೇ ಅಲ್ಲಾ ಹೂ ಅಕ್ಬರ್ ಅಂತ ಕೂಗಿ ಅಂತ ಅಂದ್ವಿ. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ ಸಾರ್’ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದಿರುವ ಆರೋಪಿಗಳು ಇದರಲ್ಲಿ ನಾವು ಬೇಕಂತಾ ಯಾವುದೇ ಮಾಡಿಲ್ಲ, ಅವರು ನಮ್ಮನ್ನು ಪ್ರಚೋದಿಸಿದ್ದಕ್ಕೆ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಸದ್ಯ ಆರೋಪಿಗಳ ಹಿನ್ನಲೆ ಕೂಡ ಪೊಲೀಸರು ವಿಚಾರಿಸಿದ್ದು, ಈ ವೇಳೆ ಯಾವುದೇ ಹಳೇಯ ಕೇಸ್ ನಲ್ಲಿ ಇರೋದ್ರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸದ್ಯ ಮೆಡಿಕಲ್ ಟೆಸ್ಟ್ ಮಾಡಿಸಿದ್ದು ಇದರಲ್ಲಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಆರೋಪಿಗಳ ವೈದ್ಯಕೀಯ ಪರೀಕ್ಷೆ ವೇಳೆ ಆಲ್ಕೋಹಾಲ್ ಕುಡಿದಿರೋದು ಬಯಲಾಗಿದೆ. ಸಮೀರ್ ಹಾಗೂ ಫರ್ಮಾನ್ ಇಬ್ಬರು ಹಾಲ್ಕೋ ಹಾಲ್ ಕುಡಿದಿದ್ದು, ಇಬ್ಬರು ಅಪ್ರಾಪ್ತರು ಕುಡಿದಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.