ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವು ಭಾರತದ ವಿರುದ್ಧವೇ “ಹೋಮ್” (ಆತಿಥೇಯ) ತಂಡದ ಸೌಲಭ್ಯಗಳನ್ನು ಆನಂದಿಸಲು ಸಜ್ಜಾಗಿದೆ. 2015ರಿಂದಲೂ ಭಾರತದಲ್ಲಿ ಹಲವು ತವರು ಮೈದಾನ ಹೊಂದಿರುವ ಅಫ್ಘಾನಿಸ್ತಾನ, ಇದೀಗ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ಆತಿಥ್ಯ ವಹಿಸಲಿದೆ. ಈ ಮೂರು ಪಂದ್ಯಗಳು ಸೆಪ್ಟೆಂಬರ್ 13, 15 ಮತ್ತು 17 ರಂದು ನಡೆಯಲಿವೆ. ‘ಸ್ಪೋರ್ಟ್್ಸ ನೌ’ ಜೊತೆ ಮಾತನಾಡಿದ ಡಿಡಿಸಿಎ ನಿರ್ದೇಶಕ ಶ್ಯಾಮ್ ಸುಂದರ್ ಶರ್ಮಾ ಅವರು ಪಂದ್ಯಗಳ ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಿದ್ದಾರೆ.”ಖಂಡಿತವಾಗಿಯೂ, ಭಾರತದಲ್ಲೇ ಭಾರತ ತಂಡಕ್ಕೆ ಅಫ್ಘಾನಿಸ್ತಾನ ಆತಿಥ್ಯ ವಹಿಸುತ್ತಿರುವ ಈ ಸರಣಿಯನ್ನು ನಾವು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತೇವೆ,” ಎಂದು ಅವರು
ಹೇಳಿದ್ದಾರೆ. ಏಷ್ಯನ್ ಗೇಮ್ಸ್ಗಾಗಿ ಭಾರತದ ಪ್ರಮುಖ ಆಟಗಾರರು ಜಪಾನ್ಗೆ ಪ್ರಯಾಣಿಸಲಿರುವುದರಿಂದ, ಬಿಸಿಸಿಐ 2024ರ ಟಿ20 ವಿಶ್ವಕಪ್ನ ಸೆಮಿಫೈನಲಿಸ್ಟ್ ತಂಡವಾದ ಅಫ್ಘಾನಿಸ್ತಾನದ ವಿರುದ್ಧ ತನ್ನ ಪೂರ್ಣ ಪ್ರಮಾಣದ ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.ಯಾಕೆ ಈ ವ್ಯವಸ್ಥೆ?ತೀವ್ರ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಭದ್ರತಾ ಕಾಳಜಿಗಳು ಅಫ್ಘಾನ್ ನೆಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸುವುದು ಅಸುರಕ್ಷಿತವಾಗಿರುವುದರಿಂದ ಅಫ್ಘಾನಿಸ್ತಾನವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತವನ್ನು ಅಧಿಕೃತವಾಗಿ “ಆತಿಥ್ಯ” ವಹಿಸುತ್ತಿದೆ. ಅಫ್ಘಾನಿಸ್ತಾನ ತಂಡವು 2015ರಿಂದಲೂ ಭಾರತದಲ್ಲಿ ಪಂದ್ಯಗಳನ್ನು ಆಡುತ್ತಿದೆ. ಬಿಸಿಸಿಐ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ 2015ರಲ್ಲಿ ಈ ಕುರಿತು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದವು. ಅಂದಿನಿಂದ ಭಾರತವೇ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ದತ್ತು ಪಡೆದ ತಾಯ್ನಾಡಿನಂತಿದೆ. ಅಪ್ಘಾನಿಸ್ತಾನ ತಂಡ ವಿವಿಧ ತಂಡಗಳೊಂದಿಗೆ ಭಾರತದಲ್ಲಿ ಆಡಿದ್ದರೂ ಭಾರತದ ವಿರುದ್ಧವೇ ಆತಿಥೇಯ ತಂಡವಾಗಿ ಪಂದ್ಯವನ್ನು ಆಡಿರಲಿಲ್ಲ.2018ರಲ್ಲಿ ಅಫ್ಘಾನಿಸ್ತಾನ ತಂಡವು ತನ್ನ ಬೇಸ್ ಅನ್ನು ಡೆಹ್ರಾಡೂನ್ಗೆ ಸ್ಥಳಾಂತರಿಸಿತು ಮತ್ತು ಅಲ್ಲಿ ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಹೋಮ್ ಸರಣಿಯನ್ನು ಆಯೋಜಿಸಿತು. ಅದೇ ವರ್ಷದಲ್ಲಿ, ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡವು ಅಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಆ ಪಂದ್ಯದಲ್ಲಿ ಭಾರತ ತಂಡ ಕೇವಲ ಎರಡು ದಿನಗಳಲ್ಲಿ ಜಯ ಸಾಧಿಸಿತ್ತು.
ಮುಲ್ಲನ್ ಪುರದಲ್ಲಿ ಟೆಸ್ಟ್ ಪಂದ್ಯಭಾರತ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಮುಲ್ಲನ್ಪುರದಲ್ಲಿ (ನ್ಯೂ ಚಂಡೀಗಢ) ಆಡಲಿದೆ. ಈ ಪಂದ್ಯವು ಜೂನ್ 6 ರಿಂದ 10 ರವರೆಗೆ ನಡೆಯಲಿದೆ. ಈ ಏಕೈಕ ಟೆಸ್ಟ್ ಪಂದ್ಯದ ನಂತರ, ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಇವು ಜೂನ್ 13, 17 ಮತ್ತು 20 ರಂದು ಕ್ರಮವಾಗಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ಜರುಗಲಿವೆ.
ದಿಲ್ಲಿಯಲ್ಲಿ ಭಾರತಕ್ಕೇ ಆತಿಥ್ಯ ವಹಿಸಲಿದೆ ಅಫ್ಘಾನಿಸ್ತಾನ!



