ಬೆಂಗಳೂರು: ತಮಗೆ ಬೇಕಾದ ಖಾತೆ ದೊರೆಯಲಿಲ್ಲವೆಂದು ತೀವ್ರ ಅಸಮಾಧಾನಗೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಹಿಂತೆಗೆಸಲು ಪಕ್ಷದ ಮುಖಂಡರು ತೀವ್ರ ಯತ್ನ ನಡೆಸಿದ್ದಾರೆ. ಆದರೆ ಇದುವರೆಗೂ ಅವರ ಯತ್ನ ಫಲಪ್ರದವಾಗಿಲ್ಲ. ನಿನ್ನೆ ರಾತ್ರಿ ಮುಖ್ಯಮಮತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಮಲಿಂಗಾರೆಡ್ಡಿ ಅವರು ಬಹಳ ಹೊತ್ತಿನ ಕಾಲ ಮಾತುಕತೆ ನಡೆಸಿದ್ದಾರೆ.
ಮಾತುಕತೆ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಇದು ನಮ್ಮ ಕುಟುಂಬದ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಮಲಿಂಗಾರೆಡ್ಡಿ ಅವರು ಎಲ್ಲಾದರೂ ಪಕ್ಷ ಬಿಡುತ್ತೇನೆ ಎಂದು ಹೇಳಿದ್ದಾರಾ? ಮತ್ತಿನ್ನೇನಾದರೂ ಹೇಳಿದ್ದಾರಾ ಎಂದು ಮರು ಪ್ರಶ್ನಿಸಿದ್ದಾರೆ. ರಾಮಲಿಂಗಾರೆಡ್ಡಿಯವರು ಮಾತನಾಡಿ, ನಮ್ಮ ಬಳಿ ಮುಖ್ಯಮಂತ್ರಿಯವರು ಮಾತನಾಡಿದ್ದಾರೆ. ಏನು ಆಗುತ್ತೋ ಕಾದು ನೋಡೋಣ. ಏನೇ ನಿರ್ಧಾರವಾಗಬೇಕಾದರೂ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ. ನನ್ನ ನಿರ್ಧಾರ ಈಗಾಗಲೇ ತಿಳಿಸಿದ್ದೇನೆ, ಏನ್ ಮಾಡುತ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.ಇಂದು ಸಹ ರಣದೀಪ್ ಸುರ್ಜೇವಾಲಾ ಅವರು ಖಾಸಗಿ ಹೋಟೆಲ್ನಲ್ಲಿ ಸುಮಾರು 25ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ಆಡಿದ್ದಾರೆ. ಮಾತುಕತೆ ವಿವರ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಒಟ್ಟಾರೆ ರೆಡ್ಡಿ ರಾಜೀನಾಮೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮುಡಿಸಿದ್ದು, ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸುರ್ಜೇವಾಲಾ ತಮ್ಮ ಮಾತುಕತೆ ಸಂದರ್ಭದಲ್ಲಿ ರೆಡ್ಡಿ ಅವರಿಗೆ ನೀಡಿರುವ ಜಲಸಂಪನ್ಮೂಲ ಖಾತೆಗೆ ಜತೆಗೆ ಮತ್ತೊಂದು ಖಾತೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವಂತೆ ಅವರನ್ನು ಕೋರಿದ್ದಾರೆ. ಆದರೆ ರಾಮಲಿಂಗಾರೆಡ್ಡಿ ತಮ್ಮ ನಿರ್ಧಾರವನ್ನು ಇದುವರೆಗೂ ತಿಳಿಸಿಲ್ಲ. ಈ ಮಧ್ಯೆ ರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ಮುಂದುವರಿಸಿದ್ದಾರೆ.
ರೆಡ್ಡಿ ಮನವೊಲಿಕೆಗೆ ಯತ್ನ ರಾಜೀನಾಮೆ ಹಿಂತೆಗೆಸಲು ಮುಖಂಡರ ಕಸರತ್ತು



