ತಿಪಟೂರು: ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಕರ್ಪೂರಿ ಠಾಕೂರ್ರವರು ಸರಳ ಸಜ್ಜನಿಕೆಯ ರಾಜಕಾರಿಣಿ, ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರ, ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾದ ಇವರಿಗೆ ಕೇಂದ್ರ ಸರ್ಕಾರದಿಂದ ಭಾರತರತ್ನ ಪ್ರಶಸ್ತಿ ಘೋಷಣೆಯಾಗಿರುವುದು ಇಡೀ ಸವಿತಾ ಸಮಾಜ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ತಾ.ಸವಿತಾ ಸಮಾಜದ ಅಧ್ಯಕ್ಷ ಎ.ಲೋಕೇಶ್ ತಿಳಿಸಿದರು.
ಬಿಹಾರದಲ್ಲಿ 2 ಅವಧಿಗೆ ಮುಖ್ಯಮಂತ್ರಿಯಾಗಿ ಹೃದಯಸ್ಪರ್ಶಿ ಜನನಾಯಕ ಎನಿಸಿಕೊಂಡಿದ್ದ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿರುವ ಹಿನ್ನೆಲೆಯಲ್ಲಿ ತಿಪಟೂರು ಸವಿತಾ ಸಮಾಜ ಮತ್ತು ಸವಿತಾ ಯುವಪಡೆ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ.ಆರ್.ಬಡಾವಣೆಯ ಯಶಸ್ವಿನಿ ವೃದ್ದಾಶ್ರಮ ಮತ್ತು ಕೋಟೆ ಬಡಾವಣೆಯ ಶ್ರೀ ಶಾರದಾ ವೃದ್ದಾಶ್ರಮದಲ್ಲಿ ಹಿರಿಯರಿಗೆ ಕ್ಷೌರ ಸೇವೆ ಮಾಡಿ, ಹಾಲು, ಬ್ರೆಡ್, ಹಣ್ಣು ವಿತರಿಸಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಸಂಘದ ಮಾಜಿ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಠಾಕೂರ್ರವರು ಮುಖ್ಯಮಂತ್ರಿಯಾಗಿದ್ದಾಗ ಭೂಸುಧಾರಣೆ, ಮೀಸಲಾತಿ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ಮಧ್ಯಪಾನ ನಿಷೇಧ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಸದಸ್ಯ ತರಕಾರಿ ಗಂಗಾಧರ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್, ಮುಖಂಡರಾದ ಶ್ರೀಧರ್ಬಾಬು, ಚಂದ್ರಶೇಖರ್, ರಾಮಚಂದ್ರ, ವರದರಾಜು, ರಾಮು, ರಮೇಶ್, ಆನಂದ್ ಮತ್ತು ಕಿರಣ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಮುಖಂಡರುಗಳು ಭಾಗವಹಿಸಿದ್ದರು.