ಬೆಂಗಳೂರು: ದರ್ಶನ್ ಪರವಾಗಿ ವಕೀಲರಾದ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರುಗಳು ಈಗಾಗಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ದರ್ಶನ್ ಪರವಾಗಿ ವಾದಿಸಲು ಅನುಭವಿ, ಹಿರಿಯ ವಕೀಲರನ್ನು ನೇಮಿಸಲಾಗಿದೆ.
ಕೆಲ ವಾರಗಳ ಹಿಂದಷ್ಟೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಎಚ್.ಡಿ ರೇವಣ್ಣ ಪರ ವಾದ ಮಂಡಿಸಿ ಅವರಿಗೆ ಜಾಮೀನು ಮಂಜೂರು ಮಾಡಿಸಿದ್ದ ಸಿವಿ ನಾಗೇಶ್ ಅವರು ಈಗ ದರ್ಶನ್ ಪರವಾಗಿ ವಾದ ಮಂಡಿಸಲಿದ್ದಾರೆ.ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರುಗಳು ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ತಂದೆ-ತಾಯಿಯ ಪರವಾಗಿ ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದರು.
ಇದೀಗ ಸಿವಿ ನಾಗೇಶ್ ಅವರು ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರ ಬದಲಿಗೆ ವಾದ ಮಂಡಿಸುತ್ತಾರೆಯೇ ಅಥವಾ ಅನಿಲ್ ಬಾಬು, ರಂಗನಾಥ ರೆಡ್ಡಿ ಅವರುಗಳ ಜೊತೆಗೆ ಸಿವಿ ನಾಗೇಶ್ ಸಹ ವಾದ ಮಂಡಿಸುತ್ತಾರೆಯೇ ಕಾದು ನೋಡಬೇಕಿದೆ. ಒಬ್ಬ ಆರೋಪಿಯ ಪರವಾಗಿ ಇಬ್ಬರು ವಕೀಲರು ವಾದ ಮಂಡಿಸುವ ಅವಕಾಶವೂ ಇದೆ. ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ವಾದ ಮಂಡಿಸಿದರೆ, ದರ್ಶನ್ ಪರವಾಗಿ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಸಿವಿ ನಾಗೇಶ್ ಅವರ ಸಹಾಯಕ ವಕೀಲರಾಗಿರುವ ರಾಘವೇಂದ್ರ ಅವರು ಈಗಾಗಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ನಟ ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ಜಾಮೀನು ಅರ್ಜಿಯನ್ನು ಹಾಕಲು ಸಕಲ ತಯಾರಿ ನಡೆಸಿರುವುದಾಗಿ ತಿಳಿಸಿದ್ದು, ಅದಕ್ಕೆ ಬೇಕಿರುವ ಅಗತ್ಯ ಮಾಹಿತಿಯನ್ನು ದರ್ಶನ್ ಅವರಿಂದ ಪಡೆದುಕೊಂಡಿದ್ದಾರೆ. ರಿಮ್ಯಾಂಡ್ ಶೀಟ್ ಇನ್ನಿತರೆಗಳನ್ನು ಪೊಲೀಸರಿಂದ ಪಡೆದುಕೊಂಡಿದ್ದು, ಜೂನ್ 22 ರಂದೇ ಸಿವಿ ನಾಗೇಶ್ ಅವರು ತಮ್ಮ ವಾದ ಮಂಡಿಸಲಿದ್ದಾರೆ.