ಚಿಕ್ಕಮಗಳೂರು: ಬಿಇಒ ಕಚೇರಿ ಮ್ಯಾನೇಜರ್ ಓರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ಬಿಇಒ ಕಚೇರಿಯಲ್ಲಿ ನಡೆದಿದೆ.ಮೂಡಿಗೆರೆ ಬಿಇಒ ಕಚೇರಿ ಮ್ಯಾನೇಜರ್ ನಿಂಗನಾಯ್ಕ್(57) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ಬಿಇಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದು ಬಿಇಒ ಹೇಮಂತ್ ರಾಜ್ ಅವರನ್ನು 10 ಸಾವಿರ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಹೇಮಂತ್ ರಾಜ್ ಅವರ ಬಂಧನವಾದ ದಿನದಿಂದ ಆತ್ಮಹತ್ಯೆಗೆ ಒಳಗಾಗಿರುವ ಮ್ಯಾನೇಜರ್ ನಿಂಗನಾಯ್ಕ್ ಅವರು ಆತಂಕಕ್ಕೊಳಗಾಗಿದ್ದರು ಎನ್ನಲಾಗಿದೆ.
ಬಿಇಒ ಕಚೇರಿಯಲ್ಲಿ ಹಣದ ದುರುಪಯೋಗವಾಗಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಆತ್ಮಹತ್ಯೆಗೆ ಶರಣಾಗಿರುವ ನಿಂಗನಾಯ್ಕ್ ಅವರು ಡೆತ್ನೋಟ್ ಬರೆದಿಟ್ಟಿದ್ದು, ಡೆತ್ನೋಟ್ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆ, ಕೆಲಸದ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.