ವಿಜಯಪುರ: ರಸ್ತೆಯಲ್ಲಿ ಸಿಕ್ಕಿದ ಆಮೆಯನ್ನು ಸಂರಕ್ಷಣೆ ಮಾಡಿದ ವಿಜಯಪುರ ಇಂದಿರಾನಗರದ ಗೂಡ್ಸ್ ಚಾಲಕ ಪಿಳ್ಳಪ್ಪ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಮೆಯನ್ನು ಸೋಮವಾರ ಒಪ್ಪಿಸಿದ್ದಾರೆ.
ಶನಿವಾರ ರಾತ್ರಿ ಗೂಡ್ಸ್ ವಾಹನ ಚಾಲನೆ ಮಾಡುವ ವೇಳೆ ಮಳೆಯಿಂದಾಗಿ ರಸ್ತೆಗೆ ಬಂದಿದ್ದ ಆಮೆಯೊಂದು ರಸ್ತೆ ದಾಟಲು ಪರದಾಡುತ್ತಿದ್ದ ವೇಳೆ, ಆಮೆಯನ್ನು ರಕ್ಷಿಸಿದ ಅವರು, ಅದನ್ನು ಪೋಷಣೆ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ವಿಜಯಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರೆಹಮಾನ್ ಅವರಿಗೆ ಮಾಹಿತಿ ನೀಡಿ, ಆಮೆಯನ್ನು ಒಪ್ಪಿಸಿದರು.
ಆಮೆಯನ್ನು ವಶಕ್ಕೆ ಪಡೆದ ಉಪ ವಲಯ ಅರಣ್ಯಾಧಿಕಾರಿ ರೆಹಮಾನ್ ಮಾತನಾಡಿ, ವಾಹನಗಳಿಗೆ ಸಿಲುಕುತ್ತಿದ್ದ ಆಮೆಯನ್ನು ರಕ್ಷಣೆ ಮಾಡಿ, ಇಲಾಖೆಗೆ ಒಪ್ಪಿಸಿರುವ ಶ್ಲಾಘನೀಯವಾಗಿದೆ.ಮಳೆಗಾಲದಲ್ಲಿ ಆಮೆಗಳು ಸಹಜವಾಗಿ ರಸ್ತೆಗಳಿಗೆ ಬರುತ್ತವೆ. ಮನೆಗಳ ಸಮೀಪಕ್ಕೂ ಬರುತ್ತವೆ. ಅಂತಹವುಗಳನ್ನು ಸಂರಕ್ಷಣೆ ಮಾಡಿ, ಇಲಾಖೆಗೆ ಒಪ್ಪಿಸಬೇಕು. ಯಾವುದೇ ಕಾರಣಕ್ಕೂ ಮನೆಗಳಲ್ಲಿ ಸಾಕುವುದಕ್ಕೆ ಇಟ್ಟುಕೊಳ್ಳಬಾರದು.
ನಾವು ವಶಕ್ಕೆ ಪಡೆದಿರುವ ಆಮೆಯನ್ನು ತಾಲ್ಲೂಕಿನ ಕೋಡಿಮಂಚೇನಹಳ್ಳಿ ಬಳಿಯ ಅರಣ್ಯ ಪ್ರದೇಶದ ಬಳಿಯಿರುವ ಕೆರೆಗೆ ಬಿಡಲಾಗುತ್ತದೆ ಎಂದರು. ಗಸ್ತು ಅರಣ್ಯ ಪಾಲಕ ಅನಿಲ್, ಅರಣ್ಯ ವೀಕ್ಷಕರಾದ ವೆಂಕಟೇಶ್, ಮುನೇಗೌಡ, ಚಾಲಕ ಪಿಳ್ಳಪ್ಪ, ಸ್ಥಳೀಯರಾದ ಕನಕರಾಜು, ವಿ.ಕೃಷ್ಣಮೂರ್ತಿ ಇದ್ದರು.