ರಾಮನಗರ: ಬಿಡದಿ ಟೌನ್ಶಿಪ್ ನಿರ್ಮಾಣ ಸಂಬAಧ ಸರ್ಕಾರ ಮೂರು ಗ್ರಾಮಗಳಿಗೆ ಭೂಸ್ವಾಧೀನ ಪ್ರಕ್ರಿಯೆಯ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮೂಲಕ ಮರಣ ಶಾಸನಕ್ಕೆ ಸರ್ಕಾರ ಹೊರಟ್ಟಿದ್ದು, ಈ ನಿರ್ಧಾರವನ್ನು ಖಂಡಿಸಿ ಜೂ.21ರ ಭಾನುವಾರ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.
ಈ ಸಂಬಂಧ ಬಿಡದಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ದಿನದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯು ಬಿಡದಿ ಅಂಚೀಪುರ ಗ್ರಾಮದಿಂದ ಪ್ರಾರಂಭವಾಗಲಿದ್ದು, ಹೊಸೂರು ದೊಡ್ಡಿಯಲ್ಲಿ ಅಂತ್ಯವಾಗಲಿದೆ ಎಂದರು.
ಈ ಪಾದಯಾತ್ರೆಯು ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊ ರಡಿಸಿರುವ ಎಲ್ಲಾ ಮೂರು ಗ್ರಾಮಗಳಲಿ ನಡೆಯಲಿದೆ. ಈ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ರೈತರಿಗೂ ಧೈರ್ಯ ತುಂಬವ ಕೆಲಸವನ್ನು ನಮ್ಮ ಪಕ್ಷದ ನಾಯಕರು ಮಾಡಲಿದ್ದಾರೆ. ಇದರೊಂದಿಗೆ ಎರಡನೇ ಹಂತದ ಪಾದಯಾತ್ರೆಯ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುತ್ತದೆ ಎಂದರು.
ರೈತರಲ್ಲಿ ಗಾಬರಿ: ಇನ್ನು ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮೂರು ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಆಲ್ಲಿನ ರೈತರು ಸಾಕಷ್ಟು ಗಾಬರಿಯಾಗಿದ್ದು ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಅಧಿಸೂಚನೆ ಹೊರಡಿಸಿರುವ ಹಿನ್ನೆಯಲ್ಲಿ ರೈತರು ತಮ್ಮ ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿಯೇ ಇದ್ದಾರೆ. ಕಾನೂನಾತ್ಮಕವಾಗಿ ಹೋರಾಟ ನಡೆಸಲು ಇರುವ ಮಾರ್ಗದ ಕುರಿತು ಅರಿವು ನೀಡುವ ಕೆಲಸ ಮಾಡಲಾಗುತ್ತದೆ ಎಂದರು.
ಕೆಟ್ಟ ಚಾಳಿ : ಜೆಡಿಎಸ್ ನಾಯಕರ ಕುರಿತು ವ್ಯಂಗ್ಯವಾಡಿ ಅಂಟಿಸಿದ್ದ ಪೋಸ್ಟರ್ಗಳನ್ನು ಪೊಲೀಸರನ್ನು ಬಿಟ್ಟು ತೆರವುಗೊಳಿಸುವ ಕೆಲಸ ವನ್ನು ಮುಖಂಡರು ಮಾಡಿದ್ದಾರೆ. ಈಗಾಗಲೇ ನಮ್ಮ ನಾಯಕ ಹೆಚ್ಡಿಕೆ ಈ ಬಗ್ಗೆ ತಿಳಿಸಿದ್ದು, ಅವರಿನ್ನೂ ಕೆಟ್ಟ ಚಾಳಿ ಬಿಟ್ಟಿಲ್ಲ ಎಂದಿದ್ದಾರೆ. ಪೋಸ್ಟರ್ಗಳನ್ನು ಅಂಟಿಸಿದ್ದು ಯಾರು ಎಂಬ ಬಗ್ಗೆ ಮಾಹಿತಿ ಇದೆ. ಆದರೆ, ನಾವೂ ರೈತರಿಗಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುಮ್ಮನಿದ್ದೇವೆ ಎಂದರು.
ಸಾಲದ ಸುಳಿ: ಇನ್ನು ಬಿಡದಿ ಟೌನ್ಶಿಪ್ ನಿರ್ಮಾಣದ ಹಿಂದೆ ಸಾವಿರಾರು ಕೋಟಿ ಹಣದ ವ್ಯವಹಾರ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. 20ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಇದರಲ್ಲಿ 17ಸಾವಿರ ಕೋಟಿ ಹಣ ನೀಡಲಿದ್ದು, ಬಾಕಿ ಉಳಿದ ಹಣವನ್ನು ಜಮೀನು ತೋರಿಸು ಸಾಲ ತರುವ ಯೋಜನೆ ಹೊಂದಲಾಗಿದೆ. ಈ ಯೋಜನೆ ಒಟ್ಟಾರೆ 30ಸಾವಿರ ಕೋಟಿ ತಲುಪಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೇರೆ ಪಕ್ಷದ ಪ್ರಧಾನಿಗೆ ಯೋಜನೆಯನ್ನು ವಿವರಿಸುವ ಬದಲು, ತಮ್ಮದೇ ಪಕ್ಷದ ವರಿಷ್ಠರಾಗಿರುವ ರಾಹುಲ್ ಗಾಂಧಿ ಅವರಿಗೆ ಯೋಜನೆ ಕುರಿತು ಮಾಹಿತಿ ನೀಡಲಿ ಎಂದು ಸವಾಲು ಹಾಕಿದ ಅವರು ಈ ಬಿಡದಿ ಟೌನ್ ಶಿಪ್ ಯೋಜನೆ ಜಾರಿಯಾದಲ್ಲಿದ್ದ ಲಕ್ಷಾಂತರ ಮರ ಹಾನಿಯಾಗುವುದರ ಕುರಿತು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ವಾಕ್ ಸ್ವಾತಂತ್ರ್ಯ ಇಲ್ವೇ? : ಜಿಲ್ಲಾಧಿಕಾರಿ ತನ್ನ ಸ್ವಂತ ತಮ್ಮನ ಹೆಸರಿನಲ್ಲಿ ಬಿಡದಿ ಟೌನ್ಶಿಪ್ ಯೋಜನೆ ವೇಳೆ ಜಾಗ ಖರೀದಿ ಮಾಡಿದ್ದಾರೆ. ಇನ್ನು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಖರೀದಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಯಾಗಿ ನಾನು ಮಾತನಾಡುವುದು ತಪ್ಪಾ ಎಂದು ಪ್ರಶ್ನಿಸಿ ಎ.ಮಂಜುನಾಥ್ ಅವರು ಅಕ್ರಮ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನನಗೆ ಕೋರ್ಟ್ ಮುಖಾಂತರ ಮಾತನಾಡದಂತೆ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ ಎಂದು ಕಿಡಿಕಾರಿದರು. ಗೋಷ್ಠಿಯಲ್ಲಿ ಬಿಡದಿ ಪುರಸಭಾ ಅಧ್ಯಕ್ಷೆ ಭಾನುಪ್ರಿಯ, ಮುಖಂಡರಾದ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಇಟ್ಟಮಡು ಗೋಪಾಲ್ ರಾಮು, ಧನಂಜಯ, ವಿಜಯ್ ಕುಮಾರ್ ಮತ್ತಿತರರು ಇದ್ದರು.
ಟೌನ್ಶಿಪ್ ವಿರೋಧಿಸಿ ಜೆಡಿಎಸ್ನಿಂದ ನಾಳೆ ಬೃಹತ್ ಪಾದಯಾತ್ರೆ



